ಈ ಪುಟ್ಟ ಪೋರನ ದುಡಿಮೆ ತಿಂಗಳಿಗೆ 75 ಸಾವಿರ ರೂ. !
ವಾಷಿಂಗ್ಟನ್ : ಅ, 22: ಸಾಮಾಜಿಕ ಮಾಧ್ಯಮಗಳಲ್ಲಿ ರಾಜಕಾರಣಿಗಳು, ಸಿನಿಮಾ ನಟ-ನಟಿಯರು ತಮ್ಮದೇ ಆದ ಹವಾವನ್ನು ಕ್ರಿಯೇಟ್ ಮಾಡಿರುತ್ತಾರೆ. ಆದ್ರೆ ಇಲ್ಲೊಬ್ಬ ಒಂದು ವರ್ಷದ ಪುಟ್ಟ ಬಾಲಕ ಸಾಮಾಜಿಕ ಜಾಲತಾಣದಲ್ಲಿ ತನ್ನದೇ ಆದ ಜನಮನ್ನಣೆಗಳಿಸುವ ಮೂಲಕ ತಿಂಗಳಿಗೆ 75.000 ರೂ. ದುಡಿಯುತ್ತಿದ್ದಾನೆ.
ಅಮೆರಿಕದ ನಿವಾಸಿ ಬೇಬಿ ಬ್ರಿಗ್ಸ್ ಇಲ್ಲಿಯವರೆಗೆ 45 ಬಾರಿ ವಿಮಾನ ಪ್ರಯಾಣ ಮಾಡಿದ್ದಾನೆ. ಅಲಸ್ಕಾ, ಕ್ಯಾಲಿಫೋರ್ನಿಯಾ, ಫ್ಲೋರಿಡಾ, ಉತಾಲ್ಲದ ಪಾರ್ಕ್ಗಳು, ಬೀಚ್ಗಳು ಸೇರಿದಂತೆ ಅಮೆರಿಕದ ಸುಮಾರು 16 ರಾಜ್ಯಗಳನ್ನು ಈಗಾಗಲೇ ಸುತ್ತಾಡಿದ್ದಾನೆ. ಈ ಮಗು ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ ಇಷ್ಟು ಬಾರಿ ಪ್ರಯಾಣ ಮಾಡಿ, ತಿಂಗಳಿಗೆ 75,000 ರೂಪಾಯಿ (USD 1000)ಗಳಿಸುತ್ತಿದೆ.
ಕಳೆದ ವರ್ಷ ಅಕ್ಟೋಬರ್ 14 ರಂದು ಬ್ರಿಗ್ಸ್ ಜನಿಸಿದ್ದಾನೆ. ಜನಿಸಿದ ಮೂರು ವಾರಗಳಲ್ಲಿಯೇ ಮೊದಲ ಪ್ರವಾಸವನ್ನು ತನ್ನ ತಾಯಿ ಜೆಸ್ ಜೊತೆ ಮಾಡಿದ್ದಾನೆ. ಈ ವೇಳೆ ಅವರು ಅಲಾಸ್ಕಾದ ಕರಡಿಗಳನ್ನು, ಯೆಲ್ಲೊಸ್ಟೋನ್ ರಾಷ್ಟ್ರೀಯ ಉದ್ಯಾನವನದ ತೋಳ, ಉತಾಹ್ ನ ಸೂಕ್ಷ್ಮವಾದ ಕಮಾನು ಮತ್ತು ಕ್ಯಾಲಿಫೋರ್ನಿಯಾದ ಕಡಲತೀರಗಳನ್ನು ನೋಡಿದ್ದಾರೆ.
ಇನ್ಸ್ಟಾಗ್ರಾಮ್ ನಲ್ಲಿ 30,000ಕ್ಕೂ ಅಧಿಕ ಫಾಲೋವರ್ಸ್ (ಅನುಯಾಯಿಗಳು)ನನ್ನು ಹೊಂದುವ ಮೂಲಕ ಬ್ರಿಗ್ಸ್ಗೆ ಅಪಾರ ಅಭಿಮಾನಿಗಳಿದ್ದಾರೆ. ಮಗುವಿನ ತಾಯಿ ಮೊದಲೇ ಪಾರ್ಟ್ ಟೈಮ್ ಟೂರಿಸ್ಟ್ಸ್ ಎಂಬ ಬ್ಲಾಗ್ನನ್ನು ನಡೆಸುತ್ತಿದ್ದರು. ಅದರ ಮೂಲಕ ಅವರು ಪ್ರಪಂಚದಾದ್ಯಂತ ಸಂಚರಿಸಲು ಹಣ ಪಡೆಯುತ್ತಿದ್ದರು.
ನಾನು 2020 ರಲ್ಲಿ ಗರ್ಭಿಣಿಯಾದಾಗ ನನ್ನ ವೃತ್ತಿಜೀವನವು ಮುಗಿಯಿತು ಎಂದು ನಿಜವಾಗಿಯೂ ಹೆದರಿದ್ದೆ. ಏಕೆಂದರೆ ಮಗುವಿನೊಂದಿಗೆ ಈ ರೀತಿ ಸಂಚರಿಸಲು ಸಾಧ್ಯವಿಲ್ಲ ಅಂದುಕೊಂಡಿದ್ದೆ. ಆದ್ರೆ ಇದೀಗ ಅದು ಸಾಧ್ಯವಾಗಿದೆ ಎಂದು ಜೆಸ್ ಹೇಳಿದರು.
ಈ ಮಗುವಿನ ಪೋಷಕರು ವಿವಿಧ ಪ್ರದೇಶಗಳ ಸೌಂದರ್ಯ ಸವಿಯಲು ತಿರುಗುತ್ತಿರುತ್ತಾರೆ. ಈ ಸಂದರ್ಭದಲ್ಲಿ ಮಗುವಿನೊಂದಿಗೆ ಬ್ರಿಗ್ಸ್ ತಾಯಿ ಜೆಸ್ ವಿಡಿಯೋ ಮಾಡಿ, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುತ್ತಾರೆ. ಬಳಿಕ ಆ ವಿಡಿಯೋಗಳು ವೈರಲ್ ಆಗುವ ಮೂಲಕ ಹಣ ಗಳಿಸುತ್ತಿದ್ದಾರೆ. ಇವರು ಮಗುವಿನೊಂದಿಗೆ ಸರಿಯಾದ ಮುನ್ನೆಚ್ಚರಿಕೆಗಳೊಂದಿಗೆ ಕೋವಿಡ್ -19 ಲಾಕ್‌ಡೌನ್ ಸಮಯದಲ್ಲಿಯೂ ವಿವಿಧ ಸ್ಥಳಗಳಿಗೆ ಭೇಟಿ ನೀಡಿದ್ದಾರೆ.