ಡ್ರೋನ್ ಅಟ್ಯಾಕ್ ; ಸ್ವಲ್ಪದರಲ್ಲೇ ಇರಾಕ್ ಪ್ರಧಾನಿ ಬಚಾವ್!
ಬಾಗ್ದಾದ್, ನ 7: ಇರಾಕ್ ಪ್ರಧಾನಿ ಮುಸ್ತಫಾ ಅಲ್-ಕಾದಿಮಿ ಅವರ ಮನೆ ಮೇಲೆ ಡ್ರೋನ್ ದಾಳಿ ನಡೆದಿದೆ. ಈ ದುಷ್ಕೃತ್ಯದಲ್ಲಿ ಇರಾಕ್ ಪ್ರಧಾನಿ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ. ಇದೇ ವೇಳೆ ಘಟನೆಯನ್ನು ಅಮೆರಿಕ ತೀವ್ರವಾಗಿ ಖಂಡನೆ ಮಾಡಿದ್ದು, ಇದು ಭಯೋತ್ಪಾದನಾ ಕೃತ್ಯ ಇರುವ ಸಾಧ್ಯತೆ ಇದೆ ಅಂತಾ ತಿಳಿಸಿದೆ.
ಇರಾಕ್ ಪ್ರಧಾನಿ ಕದಿಮಿ ಅವರು ಬಾಗ್ದಾದ್‌ನ ಗ್ರೀನ್ ಝೋನ್‌ನಲ್ಲಿರುವ ನಿವಾಸದ ಮೇಲೆ ಈ ದಾಳಿ ನಡೆದಿದೆ. ದಾಳಿ ಬಳಿಕ ಶಾಂತಿ ಕಾಪಾಡುವಂತೆ ದೇಶದ ಜನತೆಯಲ್ಲಿ ಇರಾಕ್ ಪ್ರಧಾನಿ ಮನವಿ ಮಾಡಿಕೊಂಡಿದ್ದಾರೆ. ಅಲ್ಲದೆ, ಪ್ರಧಾನಿಯವರಿಗೆ ಯಾವುದೇ ರೀತಿಯ ಗಾಯಗಳಾಗಿಲ್ಲ. ಇದೊಂದು ವಿಫಲ ಹತ್ಯೆ ಯತ್ನ ಅಂತಾ ಪ್ರಧಾನಿ ಕಚೇರಿ ತಿಳಿಸಿದೆ. ಡ್ರೋನ್ ದಾಳಿಯ ನಂತರ ಪ್ರಧಾನಿ ನಿವಾಸದ ಸುತ್ತ ಭದ್ರತೆಯನ್ನು ಹೆಚ್ಚಿಸಲಾಗಿದೆ ಅಂತಾ ಇರಾಕ್ ಭದ್ರತಾ ಮೂಲಗಳು ತಿಳಿಸಿವೆ.
"ಇರಾಕ್ ಪ್ರಧಾನಿಗೆ ಯಾವುದೇ ಹಾನಿಯಾಗಿಲ್ಲ. ಈ ಭಯೋತ್ಪಾದಕ ಕೃತ್ಯವನ್ನು ನಾವು ಬಲವಾಗಿ ಖಂಡಿಸುತ್ತೇವೆ. ಇರಾಕ್‌ನ ಸಾರ್ವಭೌಮತ್ವ, ಸ್ವಾತಂತ್ರ್ಯವನ್ನು ಎತ್ತಿಹಿಡಿಯುವ ಕಾರ್ಯದಲ್ಲಿ ಮಗ್ನರಾಗಿದ್ದೇವೆ. ಹಾಗೂ ಇರಾಕಿನ ಭದ್ರತಾ ಪಡೆಗಳೊಂದಿಗೆ ನಿಕಟ ಸಂಪರ್ಕದಲ್ಲಿದ್ದೇವೆ" ಎಂದು ಯುಎಸ್ ಸ್ಟೇಟ್ ಡಿಪಾರ್ಟ್ ಮೆಂಟ್ ವಕ್ತಾರ ನೆಡ್ ಪ್ರೈಸ್ ಪ್ರತಿಕ್ರಿಯೆ ನೀಡಿದ್ದಾರೆ.
ಕಳೆದ ತಿಂಗಳ ಚುನಾವಣಾ ಫಲಿತಾಂಶಗಳ ನಂತರ ಇರಾಕ್‌ನಲ್ಲಿ ರಾಜಕೀಯ ಉದ್ವಿಗ್ನತೆ ಹೆಚ್ಚಳ ಕಂಡುಬರುತ್ತಿದೆ. ಈ ಸಂದರ್ಭದಲ್ಲಿ ಇರಾಕ್ ನಿವಾಸದ ಮೇಲೆ ದಾಳಿ ನಡೆದಿರುವುದು ಅಚ್ಚರಿ ತಂದಿದೆ.