ಮಹಲಿಂಗಪುರ

ವಿನಯದಿಂದ ಗುರುಗಳಿಗೆ ಗೌರವಿಸಿದ ಶಿಷ್ಯರು ಸಂಸ್ಕಾರವಂತರು : ಶಿವಲಿಂಗ ಸಿದ್ನಾಳ

ವಿನಯದಿಂದ ಗುರುಗಳಿಗೆ ಗೌರವಿಸಿದ ಶಿಷ್ಯರು ಸಂಸ್ಕಾರವಂತರು : ಶಿವಲಿಂಗ ಸಿದ್ನಾಳ

ವಿನಯದಿಂದ ಗುರುಗಳಿಗೆ ಗೌರವಿಸಿದ ಶಿಷ್ಯರು ಸಂಸ್ಕಾರವಂತರು : ಶಿವಲಿಂಗ ಸಿದ್ನಾಳ 

ಮಹಾಲಿಂಗಪುರ 14: ಕಲಿತು ಬಲಿತ ಮೇಲೆ ಶಲೆಮತು ಶಿಕ್ಷಕರನ್ನು ಮರೆಯುವ ಕಾಲದಲ್ಲಿ, ಗುರುವಿಗೇ ಗುರ​‍್ರ‌ ಎನ್ನುವ ಕಲಿಗಾಲದಲ್ಲಿ 22 ವರ್ಷಗಳ ನಂತರ ವಿನಯ, ವಿಧೇಯತೆಯಿಂದ ಗುರುಗಳಿಗೆ ಗೌರವಿಸಿದ ಶಿಷ್ಯರು ನಿಜಕ್ಕೂ ಸಂಸ್ಕಾರವಂತರು  ಎಂದು ಕೆಎಲ್‌ಇ ಕಾಲೇಜ್ ಉಪನ್ಯಾಸಕ ಶಿವಲಿಂಗ ಸಿದ್ನಾಳ ಹೇಳಿದರು.  

ಸ್ಥಳೀಯ ವಾಸವಿ ಸಭಾಭವನದಲ್ಲಿ ಕೆಎಲ್‌ಇ ಸಂಸ್ಥೆಯ ಎಸ್‌ಸಿಪಿ ಪ್ರೌಢಶಾಲೆಯಲ್ಲಿ 2003ರಲ್ಲಿ 10ನೇ ತರಗತಿ ಕಲಿತ ಹಳೆ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಸ್ನೇಹ ಸಮ್ಮಿಲನ ಮತ್ತು ಗುರುವಂದನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. 

ಮುಕುಟವಿಲ್ಲದ ಮಹರಾಜ, ಅರಮನೆಯಿಲ್ಲದ ಅರಸ, ಸಿಂಹಾಸನವಿಲ್ಲದ ಸಾಮ್ರಾಟ, ಛತ್ರಿ-ಚಾಮರವಿಲ್ಲದ ಚಕ್ರವರ್ತಿ ಎನಿಸಿದ ಶಿಕ್ಷಕರನ್ನು ಸಾಟಿಯಿಲ್ಲದ ಸೆಲೆಬ್ರಿಟಿಯಂತೆ ಮೆರೆಸಿ ಗೌರವಿಸುವ ಮೂಲಕ ಶಿಷ್ಯರು ತಮ್ಮ ತೂಕ ಹೆಚ್ಚಿಸಿಕೊಂಡಿದ್ದಾರೆ. ಕಲಿತು, ಬಲಿತು ದೇಶವಿದೇಶಗಳ ಉನ್ನತ ಹುದ್ದೆಗಳ ಉತ್ತುಂಗಕ್ಕೇರಿದರೂ ಅದೇ ನಯ, ವಿನಯ, ವಿದೇಯ, ಗೌರವದ ನಡವಳಿಕೆಯಿಂದ ಗುರುಭಕ್ತಿ ಮೆರೆದಿದ್ದು ಗುರು-ಶಿಷ್ಯ ಪರಂಪರೆಗೆ ಹೊಸ ಭಾಷ್ಯ ಬರೆದಂತಾಗಿದೆ ಎಂದರು. ಎಲ್ಲ ಶಿಕ್ಷಕರು ಮತ್ತು ಕೆಲ ವಿದ್ಯಾರ್ಥಿಗಳು ಮಾತನಾಡಿ, ತಮ್ಮ ಅನುಭವ, ಅನಿಸಿಕೆಗಳನ್ನು, ನೆನಪಿನ ಕ್ಷಣಗಳನ್ನು ಸ್ಮರಿಸಿದರು.  

ಇದಕ್ಕೂ ಮುನ್ನ ವಿದ್ಯಾರ್ಥಿಗಳು ಶಾಲೆಯಲ್ಲಿ ಬೆಂಚ್ ಮೇಲೆ ಕುಳಿತು ಗುರುಗಳ ಪಾಠ ಕೇಳಿದರು. ನಂತರ ಎಲ್ಲ ಗುರುವರ್ಯರನ್ನು ಮುಧೋಳ-ನಿಪ್ಪಾಣಿ ಹೆದ್ದಾರಿಯಿಂದ ವಾಸವಿ ವೇದಿಕೆವರೆಗೆ ಕರಡಿಮಜಲು ವಾದ್ಯ ಮೇಳದೊಂದಿಗೆ ಮೆರವಣಿಗೆ ಮಾಡಿದರು. ಪುಷ್ಪವೃಷ್ಠಿ ಮಾಡುವ ಮೂಲಕ ಕೈಮುಗಿದು ಸ್ವಾಗತ ಕೋರಿದರು. ಅಗಲಿದ ಗುರುಗಳು ಮತ್ತು ಸಹಪಾಠಿಗಳಿಗೆ ಮೌನ ಶ್ರದ್ದಾಂಜಲಿ ಸಲ್ಲಿಸಿ ಕಾರ್ಯಕ್ರಮ ಆರಂಭಿಸಿದರು. ನಂತರ ಹಳೆ ವಿದ್ಯಾರ್ಥಿಗಳು ತಮ್ಮ ಪ್ರಸ್ತುತ ಜೀವನದ ಜಂಜಡಗಳನ್ನು ಮರೆತು ಇಡೀ ದಿನ ಮಕ್ಕಳಂತೆ ಮೈಮರೆತು ಸಹಪಾಠಿಗಳೊಂದಿಗೆ ಹಾಗೂ ಗುರುಗಳೊಂದಿಗೆ ಬೆರೆತು ನೆನಪುಗಳನ್ನು ಮೆಲಕು ಹಾಕಿದರು.  

ವೇದಿಕೆಯಲ್ಲಿ ಎಸ್‌ಸಿಪಿ ಪ್ರೌಢಶಾಲೆ ಉಪಪ್ರಾಂಶುಪಾಲ ಬಿ.ಎನ್‌.ಅರಕೇರಿ, ಎಂ.ಎಸ್‌.ಕುಂಟೋಜಿ, ಡಾ.ಸಪನಾ ಅನಿಗೋಳ, ಜಿ.ಜಿ.ಹುಬ್ಬಳ್ಳಿ, ಎಸ್‌.ಬಿ.ಕೋರಿಶೆಟ್ಟಿ, ಎಸ್‌.ಬಿ.ಹುಲಕುಂದ, ಎಂ.ಐ.ಡಾಂಗೆ, ಎಸ್‌.ಜಿ.ಐಕ್ಯಮಠ, ರಮೇಶಬಾಬು, ಬಿ.ಡಿ.ಗೋಕಾಕ, ಡಿ.ಎ.ಬಿಸನಾಳ, ಕೆ.ಎಸ್‌.ಭಜಂತ್ರಿ, ಪಿ.ಎಂ.ಪಡೇಸೂರ, ಪಿ.ಐ.ಹಿರೇಮಠ, ಆರ್‌.ಎಸ್‌.ಯರಗಾನಿ, ಸಂಜಯ ಲಿಗಾಡೆ, ಶಿವರಾಜ ಖೋತ, ಚಿದಾನಂದ ಫಡತಾರೆ, ಶಿವಲೀಲಾ ಹಿತ್ತಲಮನಿ, ಸುನೀತಾ ಹೊಸಪೇಟಿ, ಚನ್ನಗಿರಿ ಪೂಜಾರಿ, ಮಹಾದೇವಿ ಜೀವಣಿ, ಲಕ್ಷ್ಮೀ ಕೊಣ್ಣೂರ ಅವರನ್ನು ಭಕ್ತಿಪೂರ್ವಕ ಸನ್ಮಾನಿಸಿ ಅವರದೇ ಭಾವಚಿತ್ರದ ಫ್ರೇಮ್‌ನ್ನು ಕಾಣಿಕೆಯಾಗಿ ನೀಡಿದರು. 

ಸಹಪಾಠಿಗಳೆಲ್ಲಾ ವಂತಿಕೆ ಸೇರಿಸಿ ಅಸಹಾಯಕ ಗುರುಗಳಿಗೆ ಹಾಗೂ ಸಹಪಾಠಿಗಳಿಗೆ ಸಹಾಯ ಮಾಡುವ ವಾಗ್ದಾನ ಮಾಡಿದರು. ಗುರು ಶಿಷ್ಯರು ಸಾಮೂಹಿಕವಾಗಿ ಜವಾರಿ ಭೋಜನ ಸವಿದರು. ಸೆಲ್ಫಿಗೆ ಮೊರೆ ಹೋದರು. ಕೊನೆಗೆ ರಾಷ್ಟ್ರಗೀತೆ ಹಾಡುವ ಮೂಲಕ ಕಾರ್ಯಕ್ರಮ ಮುಗಿಸಿದರು. 


ಸುದ್ದಿ ಓದಿ