ರಬಾಕಾವಿಬನಹಟ್ಟಿ

ಕ್ಷೇತ್ರದ ಅಭಿವೃದ್ಧಿಯೇ ಮೂಲ ಮಂತ್ರ : ಶಾಸಕ ಸಿದ್ದು ಸವದಿ

ಕ್ಷೇತ್ರದ ಅಭಿವೃದ್ಧಿಯೇ ಮೂಲ ಮಂತ್ರ : ಶಾಸಕ ಸಿದ್ದು ಸವದಿ

ರಬಕವಿ-ಬನಹಟ್ಟಿ 03: ಕ್ಷೇತ್ರದ ಅಭಿವೃದ್ಧಿಯಲ್ಲಿ ಶಿಕ್ಷಣ, ಆರೋಗ್ಯ ಸೇರಿದಂತೆ ಸಾರ್ವಜನಿಕರ ಮೂಲಭೂತ ಸೌಕರ್ಯಗಳಿಗೆ ಹೆಚ್ಚು ಒತ್ತು ಕೊಡಲಾಗಿದ್ದು, ಕಾಮಗಾರಿಗಳಿಗೆ ಬಿಡುಗಡೆಯಾಗಿರುವ ಅನುದಾನವನ್ನು ಬಳಿಸಿಕೊಂಡು ಕ್ಷೇತ್ರದ ಅಭಿವೃದ್ಧಿ ಮಾಡುವುದೇ ನಮ್ಮ ಮೂಲ ಮಂತ್ರವಾಗಿದೆ ಎಂದು ತೇರದಾಳ ಕ್ಷೇತ್ರದ ಶಾಸಕ ಹಾಗೂ ಕೆ.ಎಚ್‌.ಡಿ.ಸಿ. ನಿಗಮದ ಅಧ್ಯಕ್ಷ ಸಿದ್ದು ಸವದಿ ಹೇಳಿದರು. 

ಅವರು ರಬಕವಿ-ಬನಹಟ್ಟಿ ನಗರಸಭೆಯ ಸಭಾಭವನದಲ್ಲಿ ಕೆಡಿಪಿ ತ್ರೈಮಾಸಿಕ ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರೀಶೀಲಿಸಿ ಮಾತನಾಡುತ್ತಾ, ಕೋವಿಡ್ ನಿಯಮಗಳನ್ನು ಪಾಲಿಸಿ ಶಾಲೆಗಳನ್ನು ಪ್ರಾರಂಭಿಸಲು ನೀರೀಕ್ಷಿಸಲಾಗಿದ್ದು, ಮದುವೆ ಸೇರಿದಂತೆ ಇನ್ನಿತರ ಕಾರ್ಯಗಳಿಗೆ ಕೋವಿಡ್ ನಿಯಮದಂತೆ ಸರಕಾರ ಅನುಮತಿ ನೀಡಿದ್ದು, ಮಕ್ಕಳ ವಿದ್ಯಾಭ್ಯಾಸ ಹಾಳಾಗುವುದನ್ನು ತಪ್ಪಿಸಲು ಕೋವಿಡ್ ನಿಯಮಗಳನ್ನು ಪಾಲಿಸಿಕೊಂಡು ಶಾಲೆ ಪ್ರಾರಂಭಿಸಲು ಪರೀಶೀಲಿಸಲಾಗುತ್ತಿದ್ದು, ಆನ್‌ಲೈನ್ ಶಿಕ್ಷಣ ಎಲ್ಲ ವಿದ್ಯಾರ್ಥಿಗಳು ತಲುಪುವುದಿಲ್ಲ. ಮಕ್ಕಳ ಭವಿಷ್ಯತ್ತಿನ ಉದ್ದೇಶಕ್ಕಾಗಿ ಶಾಲೆಗಳನ್ನು ಪ್ರಾರಂಭಿಸುವುದು ಅನಿವಾರ್ಯವಾಗಿದೆ. ಕ್ಷೇತ್ರದಲ್ಲಿರುವ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿದೆ. ಶಾಲೆಗಳಲ್ಲಿರುವ ಡೆಸ್ಕ್‌ಗಳು ಕಳಪೆ ಮಟ್ಟದಾಗಿದ್ದು, ಉತ್ತಮ ಗುಣಮಟ್ಟದ ಡೆಸ್ಕ್‌ಗಳನ್ನು ಪರೀಶೀಲಿಸಿ ಸ್ಥಳೀಯವಾಗಿ ಖರೀದಿಸಲು ಅನುಮತಿ ಪಡೆಯಲಾಗುವುದು. ಎಲ್ಲರ ಸಹಕಾರ ಹಾಗೂ ಶ್ರಮದಿಂದ ಕ್ಷೇತ್ರದಲ್ಲಿ ಕೋವಿಡ್‌ನ ಹಾವಳಿ ಕಡಿಮೆಯಾಗಿದೆ ಆದರೂ ಸಾರ್ವಜನಿಕರು ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಕ್ಷೇತ್ರದ ಸುಮಾರು 85 ಸಾವಿರಕ್ಕೂ ಅಧಿಕ ಜನರು ವ್ಯಾಕ್ಸಿನ್ ಪಡೆದುಕೊಂಡಿದ್ದಾರೆ ಎಂದು ತಿಳಿಸಿದರು. 

ಸರಕಾರದಿಂದ ಕೆಡಿಪಿ ನಾಮನಿರ್ದೇಶಿತ ಸದಸ್ಯರಾಗಿ ನೇಮಕವಾದ ಹಣಗಂಡಿಯ ಪ್ರಸನ್ನಕುಮಾರ ದೇಸಾಯಿಯವರನ್ನು ಸನ್ಮಾನಿಸಲಾಯಿತು. 

ರಬಕವಿ-ಬನಹಟ್ಟಿ ತಹಶೀಲ್ದಾರ ಸಂಜಯ ಇಂಗಳೆ, ರಬಕವಿ-ಬನಹಟ್ಟಿ ತಾ.ಪಂ. ಕಾರ್ಯನಿರ್ವಾಹಣಾಧಿಕಾರಿ ಸಂಜಯ ಹಿಪ್ಪರಗಿ, ಜಮಖಂಡಿ ತಾ.ಪಂ. ಕಾರ್ಯನಿರ್ವಾಹಣಾಧಿಕಾರಿ ಶ್ರವಣ ನಾಯಕ, ಜಮಖಂಡಿ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಂ.ನ್ಯಾಮಗೌಡ, ರಬಕವಿ-ಬನಹಟ್ಟಿ ನಗರಸಭೆಯ ಕಾರ್ಯನಿರ್ವಾಹಕ ಅಭಿಯಂತರ ಬಸವರಾಜ ಶರಣಪ್ಪನವರ, ಮಹಾಲಿಂಗಪುರ ಮುಖ್ಯಾಧಿಕಾರಿ ಎಚ್‌. ಎಸ್‌.  ಚಿತ್ತರಗಿ, ತೇರದಾಳ ಮುಖ್ಯಾಧಿಕಾರಿ ಅಶೋಕ ಗುಡಮನಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ