ಅಂತರರಾಷ್ಟ್ರೀಯ

ಹದಗೆಟ್ಟ ಆರ್ಥಿಕ ಸ್ಥಿತಿ; ಶ್ರೀಲಂಕಾ ಅಧ್ಯಕ್ಷರ ಮನೆ ಮುಂದೆ ಹಿಂಸಾಚಾರ

ಹದಗೆಟ್ಟ ಆರ್ಥಿಕ ಸ್ಥಿತಿ; ಶ್ರೀಲಂಕಾ ಅಧ್ಯಕ್ಷರ ಮನೆ ಮುಂದೆ ಹಿಂಸಾಚಾರ

ಕೊಲಂಬೊ: ಏಪ್ರಿಲ್ 01:  ಭೀಕರ ಆರ್ಥಿಕ ಬಿಕ್ಕಟ್ಟಿನಿಂದ  ಶ್ರೀಲಂಕಾದಲ್ಲಿ ಹಿಂಸಾಚಾರ ಭುಗಿಲೆದ್ದಿದೆ.  ಶ್ರೀಲಂಕಾ ರಾಜಧಾನಿ ಕೊಲಂಬೊದಲ್ಲಿ ಜನ ಗುರುವಾರ ತಡರಾತ್ರಿ ಬೃಹತ್ ಪ್ರತಿಭಟನೆ ನಡೆಸಿದರು. 5,000 ಕ್ಕೂ ಹೆಚ್ಚು ಜನ ಕೊಲಂಬೋದಲ್ಲಿರುವ ಶ್ರೀಲಂಕಾ ಅಧ್ಯಕ್ಷರ ಭವನದ ಬಳಿ ಪ್ರತಿಭಟಿಸಿದ್ರು.  ದೇಶದಲ್ಲಿ ಹದಗೆಟ್ಟಿರುವ ಆರ್ಥಿಕ ಪರಿಸ್ಥಿತಿಗೆ ಶ್ರೀಲಂಕಾ ಅಧ್ಯಕ್ಷ ಗೋಟಬಯ ರಾಜಪಕ್ಸೆ ಅವರ ನೀತಿಗಳೇ ಕಾರಣ. ತಕ್ಷಣ ಅವರು ರಾಜೀನಾಮೆ ನೀಡಬೇಕೆಂದು  ಆಗ್ರಹಿಸಿದ್ರು.  ಪ್ರತಿಭಟನೆ ಹಿಂಸಾತ್ಮಕ ರೂಪಕ್ಕೆ ತಿರುಗಿತು. ಪ್ರತಿಭಟನಾಕಾರರು ವಾಹನಗಳಿಗೆ ಬೆಂಕಿ ಹಚ್ಚಿ ಕಲ್ಲು ತೂರಾಟ ನಡೆಸಿದ್ರು. ಈ ವೇಳೆ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಘರ್ಷಣೆ ನಡೆಯಿತು.  ಪ್ರತಿಭಟನೆಯನ್ನು ಹತ್ತಿಕ್ಕಲು ಅರೆಸೇನಾ ಪೊಲೀಸ್ ಘಟಕ, ವಿಶೇಷ ಕಾರ್ಯಪಡೆಯನ್ನು ಕರೆಸಬೇಕಾಯಿತು.

ಪ್ರತಿಭಟನೆಯಲ್ಲಿ ತೊಡಗಿದ್ದ 45 ಜನರನ್ನು ಬಂಧಿಸಲಾಗಿದೆ. ಎಎಸ್‌ಪಿ ಸೇರಿದಂತೆ 5 ಪೊಲೀಸ್ ಅಧಿಕಾರಿಗಳು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಂದು ಪೊಲೀಸ್ ಬಸ್, 1 ಪೊಲೀಸ್ ಜೀಪ್, 2 ಮೋಟರ್‌ಬೈಕ್‌ಗಳು ಮತ್ತು ಒಂದು ಜಲಫಿರಂಗಿ ಟ್ರಕ್ ಸುಟ್ಟುಹೋಗಿವೆ ಎಂದು  ಪೊಲೀಸ್ ವಕ್ತಾರರು ತಿಳಿಸಿದ್ದಾರೆ. ತೀವ್ರ  ಹಿಂಸಾಚಾರಕ್ಕೆ ಕಾರಣವಾದ ಈ ಪ್ರತಿಭಟನೆಯನ್ನು ಉಗ್ರಗಾಮಿ ಗುಂಪು ಆಯೋಜಿಸಿದೆ ಎಂದು ಸರ್ಕಾರ ಆರೋಪಿಸಿದೆ.

ಶ್ರೀಲಂಕಾ ದೇಶವು ಸ್ವಾತಂತ್ರ್ಯ ಪಡೆದ ನಂತರ ಅತ್ಯಂತ ಕೆಟ್ಟ ಆರ್ಥಿಕ ಸ್ಥಿತಿಯನ್ನ ಎದುರಿಸುತ್ತಿದೆ.  ಕಳೆದ ಒಂದು ವಾರದಿಂದ  ಆಹಾರ, ಅಗತ್ಯ ವಸ್ತುಗಳು, ಇಂಧನ ಮತ್ತು ಅನಿಲದ ಕೊರತೆ ಉಂಟಾಗಿದೆ.   ಪೆಟ್ರೋಲ್, ಡೀಸೆಲ್ ಸಿಗದೇ ಪರದಾಡುವಂತಾಗಿದೆ. ಸಾರಿಗೆ ವ್ಯವಸ್ಥೆ ಸ್ಥಗಿತವಾಗಿದೆ.   ದೇಶದ 22 ಮಿಲಿಯನ್ ಜನ ಸತತ 13 ಗಂಟೆಗಳ ವಿದ್ಯುತ್ ವಿದ್ಯುತ್ ಸೌಲಭ್ಯವಿಲ್ಲದೇ ತೊಂದರೆ ಅನುಭವಿಸಿದ್ದಾರೆ. ಔಷಧಿಗಳ ಕೊರತೆಯಿಂದಾಗಿ ಈಗಾಗಲೇ ಶಸ್ತ್ರಚಿಕಿತ್ಸೆಗಳನ್ನು ನಿಲ್ಲಿಸಲಾಗಿದೆ.   ಕೊಲಂಬೊ ಸ್ಟಾಕ್ ಎಕ್ಸ್ ಚೇಂಜ್ ವ್ಯಾಪಾರವನ್ನು ಎರಡು ಗಂಟೆಗಳವರೆಗೆ ಮಿತಿಗೊಳಿಸಬೇಕಾಗಿತ್ತು ಮತ್ತು ಕಚೇರಿಗಳು ಅನಿವಾರ್ಯವಲ್ಲದೆ ಸಿಬ್ಬಂದಿಯನ್ನು ಮನೆಯಲ್ಲೇ ಇರುವಂತೆ ಕೇಳಿಕೊಂಡವು. ವಿದ್ಯುತ್ ಉಳಿಸಲು ಬೀದಿ ದೀಪಗಳನ್ನು ಆಫ್ ಮಾಡಲಾಗುತ್ತಿದೆ.

ಇಷ್ಟೆಲ್ಲಾ ಸಂಕಷ್ಟ ಎದುರಿಸುತ್ತಿರೋ ಶ್ರೀಲಂಕಾ ಜನತೆ ನಿನ್ನೆ ತಡರಾತ್ರಿ  ಅಧ್ಯಕ್ಷ ಗೋಟಾಬಯ ರಾಜಪಕ್ಸೆ ಅವರ ಮನೆಯ ಸಮೀಪವಿರುವ ರಸ್ತೆಯಲ್ಲಿ ಜಮಾಯಿಸಲು ಪ್ರಾರಂಭಿಸಿದರು. ಭಿತ್ತಿಪತ್ರ ಹಿಡಿದು ಅಧ್ಯಕ್ಷರ ವಿರುದ್ಧ  ಘೋಷಣೆಗಳನ್ನು ಕೂಗುತ್ತಿದ್ದ ಪ್ರತಿಭಟನಾಕಾರರನ್ನು ಪೊಲೀಸರು ಚದುರಿಸಲು ಮುಂದಾದಾಗ ತೊಂದರೆ ಪ್ರಾರಂಭವಾಯಿತು. ಪ್ರತಿಭಟನಾಕಾರರ ಗುಂಪು ಪೊಲೀಸರ ಮೇಲೆ ಬಾಟಲಿಗಳು ಮತ್ತು ಕಲ್ಲುಗಳನ್ನು ಎಸೆದರು. ಅಶ್ರುವಾಯು ಮತ್ತು ನೀರಿನ ಫಿರಂಗಿಗಳಿಂದ ಮಾತ್ರ ಗುಂಪನ್ನು ನಿಯಂತ್ರಿಸಲು ಸಾಧ್ಯವಾಯಿತು.

ಪ್ರತಿಭಟನೆಯ ಸಮಯದಲ್ಲಿ ರಾಜಪಕ್ಸೆ ಮನೆಯಲ್ಲಿ ಇರಲಿಲ್ಲ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಸುದ್ದಿ ಓದಿ