ಆರ್‌.ಬಿ. ತಿಮ್ಮಾಪುರ ಅವರಿಗೆ ಡಿಸಿಎಂ ಹುದ್ದೆ ನೀಡಲು ಒತ್ತಾಯ

ಆರ್‌.ಬಿ. ತಿಮ್ಮಾಪುರ ಅವರಿಗೆ ಡಿಸಿಎಂ ಹುದ್ದೆ ನೀಡಲು ಒತ್ತಾಯ Demand to give DCM post to RB Thimmapura

ಲೋಕದರ್ಶನ ವರದಿ 

ಬೆಳಗಲಿ 02: ರಾಜ್ಯ ರಾಜಕಾರಣದಲ್ಲಿ ಹಿರಿಯ ನಾಯಕರಾಗಿರುವ ಆರ್‌.ಬಿ. ತಿಮ್ಮಾಪುರ ಅವರಿಗೆ ಉಪಮುಖ್ಯಮಂತ್ರಿ (ಡಿಸಿಎಂ) ಹುದ್ದೆಯನ್ನು ನೀಡಬೇಕೆಂದು ಬೆಳಗಲಿಯ ಕಾಂಗ್ರೆಸ್ ಯುವ ಮುಖಂಡರಾದ ಪ್ರವೀಣ ಪಾಟೀಲ ಹಾಗೂ ಮಂಜುನಾಥ ಗಾಣಿಗೇರ ಅವರ ನೇತೃತ್ವದ ಯುವ ಬಳಗವು ಬಲವಾಗಿ ಆಗ್ರಹಿಸಿದೆ. 

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಯುವ ಮುಖಂಡರು, "ಆರ್‌.ಬಿ. ತಿಮ್ಮಾಪುರ ಅವರು ದಶಕಗಳಿಂದ ಪಕ್ಷದ ಸಂಘಟನೆಗಾಗಿ ಅಪಾರ ಸೇವೆ ಸಲ್ಲಿಸಿದ್ದಾರೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ, ಸಮಾಜದ ಎಲ್ಲಾ ವರ್ಗದ ಜನರನ್ನು ಒಗ್ಗೂಡಿಸಿಕೊಂಡು ಹೋಗುವ ಶಕ್ತಿ ಮತ್ತು ಅನುಭವ ಅವರಿಗೆ ಇದೆ. ಕಳೆದ ಹಲವು ವರ್ಷಗಳಿಂದ ಅವರು ಪಕ್ಷದ ಬೆಳವಣಿಗೆಗೆ ನೀಡಿದ ಕೊಡುಗೆಯನ್ನು ಪರಿಗಣಿಸಿ, ಅವರಿಗೆ ಸರ್ಕಾರದಲ್ಲಿ ಉನ್ನತ ಹುದ್ದೆಯಾದ ಡಿಸಿಎಂ ಸ್ಥಾನವನ್ನು ನೀಡಬೇಕು," ಎಂದು ಒತ್ತಾಯಿಸಿದ್ದಾರೆ. 

ಪಕ್ಷದ ವರಿಷ್ಠರು ಈ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಅನುಭವಿ ನಾಯಕರನ್ನು ಗುರುತಿಸಿ ಅವರಿಗೆ ಸೂಕ್ತ ಸ್ಥಾನಮಾನ ನೀಡುವುದರಿಂದ ಪಕ್ಷಕ್ಕೆ ಹೆಚ್ಚಿನ ಬಲ ಬರುತ್ತದೆ. ಮುಂಬರುವ ದಿನಗಳಲ್ಲಿ ಪಕ್ಷದ ಸಿದ್ಧಾಂತಗಳನ್ನು ತಳಮಟ್ಟದವರೆಗೆ ಕೊಂಡೊಯ್ಯಲು ತಿಮ್ಮಾಪುರ ಅವರಂತಹ ನಾಯಕರ ನೇತೃತ್ವ ಅಗತ್ಯವಿದೆ ಎಂದು ಬೆಳಗಲಿಯ ಯುವ ಬಳಗ ಅಭಿಪ್ರಾಯಪಟ್ಟಿದೆ.