ಗದಗ

ಗದಗ ರೈಲ್ವೆ ಮೇಲ್ಸೇತುವೆ ಉದ್ಘಾಟನೆಗೆ ಒತ್ತಾಯ

ಗದಗ ರೈಲ್ವೆ ಮೇಲ್ಸೇತುವೆ ಉದ್ಘಾಟನೆಗೆ ಒತ್ತಾಯ


ಗದಗ, 8: ಗಂಗಾಪುರ ಪೇಟೆ ಮಾರ್ಗದ ಹೊಂಬಳ ರಸ್ತೆಯ ರೈಲ್ವೆ ಗೇಟ್ ಸಂಖ್ಯೆ 32ರ ಬಳಿ ಕಳೆದ ಒಂದು ದಶಕದಿಂದ ನೆನೆಗುದಿಗೆ ಬಿದ್ದಿದ್ದ ರೈಲ್ವೆ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಂಡಿದ್ದರೂ, ಸಾರ್ವಜನಿಕ ಸಂಚಾರಕ್ಕೆ ಅಧಿಕೃತವಾಗಿ ಮುಕ್ತಗೊಳಿಸದೆ ವಿಳಂಬ ಮಾಡುತ್ತಿರುವುದಕ್ಕೆ ಸಾಮಾಜಿಕ ಕಾರ್ಯಕರ್ತ ಕೃಷ್ಣ ಎಚ್‌. ಹಡಪದ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.  

ಸೇತುವೆಯ ಮೇಲ್ಭಾಗ ಹಾಗೂ ಕೆಳಭಾಗದ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ವಾಹನ ಸಂಚಾರಕ್ಕೆ ರಸ್ತೆ ಸಿದ್ಧವಾಗಿದೆ. ಆದರೆ ಸೈಡ್ಲೈಟ್ ಅಳವಡಿಕೆ ಹಾಗೂ ರಸ್ತೆ ಮಾರ್ಕಿಂಗ್ನಂತಹ ಸಣ್ಣಪುಟ್ಟ ಕೆಲಸಗಳನ್ನು ಕಾರಣವಾಗಿಸಿಕೊಂಡು ಉದ್ಘಾಟನೆ ವಿಳಂಬ ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.  

ಸಾರ್ವಜನಿಕರ ಕೋಟ್ಯಂತರ ರೂಪಾಯಿ ಹಣದಲ್ಲಿ ನಿರ್ಮಿಸಿರುವ ಮೇಲ್ಸೇತುವೆ ಇದೀಗ ಅಕ್ರಮ ಚಟುವಟಿಕೆಗಳ ತಾಣವಾಗುತ್ತಿದೆ. ಮೇಲ್ಸೇತುವೆಯ ಮೇಲ್ಭಾಗದಲ್ಲಿ ಮದ್ಯಪಾನ ಮಾಡಿ ಎಸೆದಿರುವ ನೂರಾರು ಮದ್ಯದ ಟೆಟ್ರಾ ಪ್ಯಾಕ್ಗಳು ಹಾಗೂ ಕೆಳಭಾಗದಲ್ಲಿ ಎಲ್ಲೆಂದರಲ್ಲಿ ಬಿದ್ದಿರುವ ಪ್ಲಾಸ್ಟಿಕ್ ತ್ಯಾಜ್ಯ ಮತ್ತು ಖಾಲಿ ಮದ್ಯದ ಬಾಟಲಿಗಳು ಇದಕ್ಕೆ ಸಾಕ್ಷಿಯಾಗಿವೆ ಎಂದು ಹಡಪದ ತಿಳಿಸಿದ್ದಾರೆ.  

ಮೇಲ್ಸೇತುವೆ ಹಾಗೂ ಸುತ್ತಮುತ್ತಲಿನ ಪ್ರದೇಶ ‘ಬಾರ್ ಆ್ಯಂಡ್ ರೆಸ್ಟೋರೆಂಟ್‌’ ಮತ್ತು ಕಸದ ತೊಟ್ಟಿಯಂತಾಗಿದ್ದು, ಮಹಿಳೆಯರು ಹಾಗೂ ಶಾಲಾ ಮಕ್ಕಳ ಸಂಚಾರಕ್ಕೂ ಭಯದ ವಾತಾವರಣ ನಿರ್ಮಾಣವಾಗಿದೆ. ಇದಕ್ಕೆ ಸಂಬಂಧಿಸಿದ ಅಧಿಕಾರಿಗಳೇ ನೇರ ಹೊಣೆ ಎಂದು ಅವರು ಆರೋಪಿಸಿದ್ದಾರೆ.  


ಸುದ್ದಿ ಓದಿ