ಬರದಿಂದ ರೈತರಿಗೆ ಎಕರೆಗೆ 50 ಸಾವಿರ ಪರಿಹಾರಕ್ಕೆ ಆಗ್ರಹ
ಯರಗಟ್ಟಿ 9: ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿ ಎದುರಾಗಿರುವ ಹಿನ್ನೆಲೆಯಲ್ಲಿ ಬಿಜೆಪಿ ನೇತೃತ್ವದ ಬರ ಅಧ್ಯಯನ ತಂಡ ಭಾನುವಾರ ಬೆಳಗಾವಿ ಜಿಲ್ಲೆಗೆ ಭೇಟಿ ನೀಡಿ ರೈತರ ಸಂಕಷ್ಟಗಳನ್ನು ಪರೀಶೀಲಿಸಿತು. ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ನೇತೃತ್ವದ ತಂಡ ಯರಗಟ್ಟಿ ತಾಲೂಕಿನ ಸೊಪ್ಪಡ್ಲ ಗ್ರಾಮದ ಹೊರವಲಯದ ಜಮೀನುಗಳಿಗೆ ಭೇಟಿ ನೀಡಿ, ಮಳೆ ಕೊರತೆಯಿಂದ ಸಂಪೂರ್ಣ ಒಣಗಿರುವ ಹೆಸರು ಹಾಗೂ ಮೆಕ್ಕೆಜೋಳದ ಬೆಳೆಗಳನ್ನು ವೀಕ್ಷಿಸಿತು. ಬಳಿಕ ಸ್ಥಳೀಯ ರೈತರ ಸಮಸ್ಯೆಗಳನ್ನು ಆಲಿಸಿ, ಬೆಳೆ ನಷ್ಟದ ಕುರಿತು ಮಾಹಿತಿ ಪಡೆದುಕೊಂಡಿತು. ಬರದಿಂದ ಸಂಕಷ್ಟಕ್ಕೊಳಗಾಗಿರುವ ಉತ್ತರ ಕರ್ನಾಟಕದ ರೈತರಿಗೆ ಸರ್ಕಾರ ತಕ್ಷಣವೇ ಎಕರೆಗೆ 50 ಸಾವಿರ ಪರಿಹಾರ ಘೋಷಿಸಬೇಕು. ಬೆಳೆ ಹಾನಿ ಸಮೀಕ್ಷೆಯನ್ನು ಪಾರದರ್ಶಕವಾಗಿ ನಡೆಸಿ ಅರ್ಹ ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ರವಿಕುಮಾರ್ ಸರ್ಕಾರವನ್ನು ಆಗ್ರಹಿಸಿದರು.
ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, “ಖಜಾನೆ ಖಾಲಿಯಾಗಿದೆ ಎಂಬ ಕಾರಣ ನೀಡಿ ಸರ್ಕಾರ ಸರಿಯಾಗಿ ಬರ ಸಮೀಕ್ಷೆ ನಡೆಸುತ್ತಿಲ್ಲ” ಎಂದು ಆರೋಪಿಸಿದರು. ರೈತರಾದ ಶೇಖಪ್ಪ ಹಳ್ಳಿ ಹಾಗೂ ಮಹಾಂತೇಶ ತೋಟಗಿ ಮಾತನಾಡಿ, ಮುಂಗಾರು ಮಳೆ ಕೈಕೊಟ್ಟಿರುವುದರಿಂದ ಸಂಕಷ್ಟಕ್ಕೆ ಸಿಲುಕಿದ್ದು, ಹೆಸರು ಹಾಗೂ ಗೋವಿನಜೋಳ ಬೆಳೆಗಾಗಿ ಪ್ರತಿ ಎಕರೆಗೆ ಸುಮಾರು 25 ಸಾವಿರ ವೆಚ್ಚ ಮಾಡಲಾಗಿದೆ. ಹಾಕಿದ ಬಂಡವಾಳವೂ ಕೈಗೆಟುಕದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಳಲು ತೋಡಿಕೊಂಡರು. ಅಧ್ಯಯನ ಪ್ರವಾಸದಲ್ಲಿ ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ, ಖಾನಾಪುರ ಶಾಸಕ ವಿಠ್ಠಲ ಹಲಗೇಕರ್, ರಾಯಬಾಗ ಶಾಸಕ ದುರ್ಯೋಧನ ಐಹೊಳೆ, ಮಾಜಿ ಶಾಸಕ ಎ.ಎಸ್. ನಡಹಳ್ಳಿ, ಬೆಳಗಾವಿ ವಿಭಾಗದ ಸಹ ಪ್ರಭಾರಿ ಬಸವರಾಜ ಯಕಂಚಿ, ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಷ ಪಾಟೀಲ, ರೈತ ಮೋರ್ಚಾ ಅಧ್ಯಕ್ಷ ಮಹಾಂತೇಶ ತೋಟಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.