ಶ್ರೀಲಂಕಾದಲ್ಲಿ ವೈದ್ಯಕೀಯ ತುರ್ತುಸ್ಥಿತಿ ಘೋಷಣೆ
ಕೊಲಂಬೊ: ಏಪ್ರಿಲ್ 05: ದಿನೇ ದಿನೇ ಶ್ರೀಲಂಕಾದ ಪರಿಸ್ಥಿತಿ ಹದಗೆಡುತ್ತಿದ್ದು, ಔಷಧಗಳು ಹಾಗೂ ಸಲಕರಣೆಗಳ ಕುಂದು ಕೊರತೆ ಎದುರಾದ ಕಾರಣ ದೇಶದ ಉನ್ನತ ವೈದ್ಯಕೀಯ ಸಂಸ್ಥೆಯು ವೈದ್ಯಕೀಯ ತುರ್ತು ಪರಿಸ್ಥಿತಿ ಘೋಷಿಸಿದೆ.
ಸೋಮವಾರ ನಡೆದ ಬಿಕ್ಕಟ್ಟು ಸಭೆಯ ನಂತರ ಶ್ರೀಲಂಕಾದಲ್ಲಿ ವೈದ್ಯಕೀಯ ತುರ್ತು ಪರಿಸ್ಥಿತಿಯನ್ನು ಘೋಷಿಸಲು ನಿರ್ಧರಿಸಲಾಗಿದೆ ಎಂದು ರಾಷ್ಟ್ರದ ಉನ್ನತ ವೈದ್ಯಕೀಯ ಸಂಸ್ಥೆ, ಸರ್ಕಾರಿ ವೈದ್ಯಕೀಯ ಅಧಿಕಾರಿಗಳ ಸಂಘ (GMOA) ತಿಳಿಸಿದೆ.
ದೇಶಾದ್ಯಂತ ಔಷಧ ಮತ್ತು ಸಲಕರಣೆಗಳ ಗಂಭೀರ ಕೊರತೆ ಎದುರಾಗಿದೆ, ಆಸ್ಪತ್ರೆಗಳು ತುರ್ತು ವೈದ್ಯಕೀಯ ಚಿಕಿತ್ಸೆ ಒದಗಿಸಲು ಹೆಣಗಾಡುತ್ತಿವೆ ಎಂದು ಅಸೋಸಿಯೇಷನ್ ಹೇಳಿದೆ.
ವೈದ್ಯಕೀಯ ವ್ಯವಸ್ಥೆಯ ಸಂಪೂರ್ಣ ಸ್ಥಗಿತವನ್ನು ತಡೆಯಲು ಸರ್ಕಾರ ಮತ್ತು ಆರೋಗ್ಯ ಸಚಿವಾಲಯ ಎರಡೂ ವಿಫಲವಾಗಿವೆ. ಅಂದರೆ ಜನರ ಬದುಕುವ ಹಕ್ಕು ಮತ್ತು ಆರೋಗ್ಯ ಸೇವೆಗಳ ಹಕ್ಕನ್ನು ಖಾತರಿಪಡಿಸಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ ಎಂದು ಸರ್ಕಾರಿ ವೈದ್ಯಕೀಯ ಅಧಿಕಾರಿಗಳ ಸಂಘ ಹೇಳಿಕೆಯಲ್ಲಿ ತಿಳಿಸಿದೆ.