ಇಂಡೋನೇಷ್ಯಾದಲ್ಲಿ ಪ್ರವಾಹ,ಭೂಕುಸಿತಗಳಿಂದ ಸಾವಿನ ಸಂಖ್ಯೆ 36ಕ್ಕೆ ಏರಿಕೆ
ಇಂಡೋನೇಷ್ಯಾ, ಜುಲೈ 18: ಇಂಡೋನೇಷ್ಯಾದ ದಕ್ಷಿಣ ಸುಲಾವೆಸಿಯಲ್ಲಿ ಪ್ರವಾಹ ಮತ್ತು ಭೂಕುಸಿತಗಳಿಂದಾಗಿ ಸಾವನ್ನಪ್ಪಿದವರ ಸಂಖ್ಯೆ 36 ಕ್ಕೆ ಏರಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಪ್ರವಾಹದಿಂದ 3,000 ಕ್ಕೂ ಹೆಚ್ಚು ಜನರು ತಮ್ಮ ಮನೆಗಳನ್ನು ತೊರೆದಿದ್ದಾರೆ. ಅಲ್ಲದೆ, ಇನ್ನೂ 16 ಜನರು ನಾಪತ್ತೆಯಾಗಿದ್ದಾರೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆ ವಕ್ತಾರ ರಾಡಿತ್ಯ ಜತಿ ಶುಕ್ರವಾರ ತಡರಾತ್ರಿ ಕ್ಸಿನ್ಹುವಾ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
‘ನಾಪತ್ತೆಯಾದವರ ಪತ್ತೆ ಮಾಡಲು ಮತ್ತು ತೊಂದರೆಗೊಳಗಾದ ನಿವಾಸಿಗಳನ್ನು ಸ್ಥಳಾಂತರಿಸಲು ರಕ್ಷಣಾ ಸಿಬ್ಬಂದಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ.’ ಎಂದು ವಕ್ತಾರರು ತಿಳಿಸಿದ್ದಾರೆ.
ಸುಲಾವೆಸಿ ಪ್ರಾಂತ್ಯದ ವಿವಿಧೆಡೆ 4,000 ಕ್ಕೂ ಹೆಚ್ಚು ಮನೆಗಳು ಕೆಸರು ಮತ್ತು ಮರಳಿನಲ್ಲಿ ಮುಳುಗಿವೆ. 359 ಅಧಿಕಾರಿಗಳು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ ಎಂದು ಅವರು ಹೇಳಿದ್ದಾರೆ.
ದಕ್ಷಿಣ ಸುಲವೇಸಿ ಪ್ರಾಂತ್ಯದಲ್ಲಿ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಪ್ರವಾಹ ಉಂಟಾಗಿದ್ದು, ಭೂಕುಸಿತಗಳು ಅನೇಕ ಕಡೆ ಸಂಭವಿಸಿವೆ.