ಜೂನ್ 1ರಿಂದ ಶಾಂಘೈನಲ್ಲಿ ಕೋವಿಡ್ ನಿರ್ಬಂಧಗಳಿಗೆ ತೆರೆ
ಬೀಜಿಂಗ್: ಮೇ 30: ಚೀನಾದ ವ್ಯಾಪಾರ ಚಟುವಟಿಕೆಗಳ ಅತಿದೊಡ್ಡ ಕೇಂದ್ರವಾದ ಶಾಂಘೈ ನಗರದಲ್ಲಿ ಕೋವಿಡ್ -19 ಪ್ರಕರಣಗಳು ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ, ವ್ಯಾಪಾರ ಚಟುವಟಿಕೆಗಳ ಮೇಲೆ ಲಾಕ್‌ಡೌನ್ ಅಡಿಯಲ್ಲಿ ವಿಧಿಸಲಾದ ನಿರ್ಬಂಧಗಳನ್ನು ಬುಧವಾರದಿಂದ ತೆಗೆದುಹಾಕಲಾಗುತ್ತದೆ.
ಎರಡು ತಿಂಗಳ ಕಾಲ ಈ ಕಟ್ಟುನಿಟ್ಟಿನ ನಿರ್ಬಂಧಗಳಿಂದಾಗಿ ಇಲ್ಲಿ ವ್ಯಾಪಾರ ಸ್ಥಗಿತಗೊಂಡಿತ್ತು ಎಂದು ಚೀನಾದ ಅಧಿಕಾರಿಗಳು ತಿಳಿಸಿದ್ದಾರೆ. ನಗರದ ಆರ್ಥಿಕತೆಯನ್ನು ಬೆಂಬಲಿಸುವ ಸಂಬಂಧ ಹೊಸ ಯೋಜನೆಗಳನ್ನು ಸಹ ಸಿದ್ಧಪಡಿಸಲಾಗಿದೆ ಎಂದು ಹೇಳಿದರು.
ಬಿಬಿಸಿ ವರದಿಯ ಪ್ರಕಾರ, ಕಳೆದ ಇಪ್ಪತ್ನಾಲ್ಕು ಗಂಟೆಗಳಲ್ಲಿ ಇಲ್ಲಿ ಕೊರೆನಾ ವೈರಸ್ ಪ್ರಕರಣಗಳು ದಿನಕ್ಕೆ 170 ರಿಂದ 122 ಕ್ಕೆ ಇಳಿದ ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ. ಮಾರ್ಗಸೂಚಿಗಳನ್ನು ಸಹ ಪರಿಷ್ಕರಿಸಲಾಗುತ್ತಿದೆ ಎಂದು ವರದಿ ಮಾಡಿದೆ.
ಕಾರ್ಖಾನೆಗಳಲ್ಲಿ ಕಾರ್ಯಾಚರಣೆ ಮತ್ತು ಉತ್ಪಾದನೆಯನ್ನು ಪುನರಾರಂಭಿಸಲು ಅನಗತ್ಯ ನಿರ್ಬಂಧಗಳನ್ನು ತೆಗೆದುಹಾಕಲಾಗುವುದು ಎಂದು ನಗರದ ಉಪ ಮೇಯರ್ ವು ಕ್ವಿಂಗ್ ಅವರನ್ನು ಉಲ್ಲೇಖಿಸಿ ಬಿಬಿಸಿ ವರದಿ ಮಾಡಿದೆ. ಬೀಜಿಂಗ್‌ನಲ್ಲಿಯೂ ಸಹ, ಕೊರೊನಾ ವೈರಸ್ ಪ್ರಕರಣಗಳು ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಸಾರಿಗೆ, ಶಾಪಿಂಗ್ ಮಾಲ್‌ಗಳು ಮತ್ತು ಇತರ ಚಟುವಟಿಕೆಗಳನ್ನು ಪುನರಾರಂಭಿಸಲಾಗಿದೆ.