ಫ್ರಾನ್ಸ್ ನಲ್ಲಿ ಕೋವಿಡ್ 3ನೇ ಅಲೆ … ಉಲ್ಬಣಿಸುತ್ತಿರುವ ಸೋಂಕು ಪ್ರಕರಣಗಳು
ಪ್ಯಾರಿಸ್, ಡಿ 26: ಫ್ರಾನ್ಸ್‌ನಲ್ಲಿ ಕೋವಿಡ್ ಮೂರನೇ ಅಲೆ ಭಾರಿ ಪ್ರಭಾವ ಬೀರುತ್ತಿದೆ. ರಾಜಧಾನಿ ಪ್ಯಾರಿಸ್ ಸೇರಿದಂತೆ ದೇಶದ ಹಲವು ನಗರಗಳಲ್ಲಿ ಸೋಂಕು ಪ್ರಕರಣಗಳು ಹೆಚ್ಚುತ್ತಿವೆ.
ಕಳೆದ 24 ಗಂಟೆಗಳಲ್ಲಿ 1,04,611 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿವೆ ಎಂದು ಫ್ರಾನ್ಸ್ ಆರೋಗ್ಯ ಇಲಾಖೆ ತಿಳಿಸಿದೆ.
ಜಗತ್ತಿನಲ್ಲಿ ಕೋವಿಡ್ ರೂಪಾಂತರಿ ತಳಿ ಒಮಿಕ್ರಾನ್ ಸೋಂಕು ಅತೀ ವೇಗವಾಗಿ ಹರಡುತ್ತಿದ್ದು, ಕೋವಿಡ್ ಸೋಂಕಿತರ ಸಂಖ್ಯೆಯೂ ಹೆಚ್ಚಳವಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮಾಕ್ರಾನ್ ಮತ್ತು ಸರ್ಕಾರದ ಪ್ರಮುಖ ಸದಸ್ಯರು ಕೋವಿಡ್ ಸುರಕ್ಷತಾ ಕ್ರಮಗಳ ಕುರಿತು ನಾಳೆ ಮಹತ್ವದ ಸಭೆ ನಡೆಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದ್ದಾರೆ ಎಂದು ವರದಿಯಾಗಿದೆ.
ಕೋವಿಡ್ ಸೋಂಕು ಉಲ್ಬಣಿಸುತ್ತಿರುವ ಹಿನ್ನಲೆಯಲ್ಲಿ ಕಳೆದ ಶುಕ್ರವಾರದಿಂದ ಬೂಸ್ಟರ್ ಡೋಸ್ನೀಡಲಾಗುತ್ತಿದೆ. ಆರೋಗ್ಯ ಪ್ರಾಧಿಕಾರ ಶಿಫಾರಸು ಮಾಡಿದ ವಯಸ್ಕರು ತಮ್ಮ ಆರಂಭಿಕ ಲಸಿಕೆ ಪಡೆದ ಮೂರು ತಿಂಗಳ ನಂತರ ಬೂಸ್ಟರ್ ಡೋಸ್ ಹಾಕಿಸಿಕೊಳ್ಳುತ್ತಿದ್ದಾರೆ.
ಫ್ರಾನ್ಸ್‌ನಲ್ಲಿ ಈವರೆಗೆ ಒಟ್ಟು 122,546 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದು, ಶೇಕಡಾ 76.5ರಷ್ಟು ಜನರು ಸಂಪೂರ್ಣ ಲಸಿಕೆ ಪಡೆದುಕೊಂಡಿದ್ದಾರೆ.