ಮುಧೋಳ

ನಿರಂತರ ಮಳೆ 24 ಭಾಗಶಃ ಕುಸಿತ ಎರಡು ಜಾನುವಾರ ಬಲಿ

ನಿರಂತರ ಮಳೆ  24 ಭಾಗಶಃ ಕುಸಿತ ಎರಡು ಜಾನುವಾರ ಬಲಿ

ಮುಧೋಳ:ತಾಲ್ಲೂಕಿನಲ್ಲಿ ಕಳೆದ ಎರಡು ದಿನಗಳಿಂದ ಸುರಿದ ಮಳೆರಾಯ ಶನಿವಾರ ಬೆಳಿಗ್ಗೆ  ನಂತರ ಸ್ವಲ್ಪ ಬಿಡುವು ನೀಡಿದ್ದ. ರಾತ್ರಿಯಿಡೀ ಧಾರಾಕಾರ ಮಳೆ ಸುರಿದಿದ್ದು, ಬೆಳಿಗ್ಗೆಯೂ ಮುಂದುವರೆದಿತ್ತು. ಹೀಗಾಗಿ ಶಾಲೆಹಿಕಾಲೇಜಿಗೆ ಹೋಗುವ ಮಕ್ಕಳು, ಕಚೇರಿಗೆ ತೆರಳುವವರು, ನಿತ್ಯದ ಕೆಲಸಕ್ಕೆ ಹೊರಗೆ ಹೊರಟವರು ತೀವ್ರ ತೊಂದರೆ ಅನುಭವಿಸಿದರು. ಬಿಡುವಿಲ್ಲದೆ ಸುರಿಯುತ್ತಿದ್ದ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.ಮೋಡ ಮುಚ್ಚಿದ ವಾತಾವರಣದ ಕಾರಣ ಮಳೆಯ ಬಿಡುವಿನ ನಡುವೆಯೂ ಜನರು ಮನೆಯಿಂದ ಹೊರಗೆ ಹೋಗಲು ಮನಸ್ಸು ಮಾಡಲಿಲ್ಲ. ಥಂಡಿ ಹವೆಗೆ ಹೆದರಿ ಮನೆಯಲ್ಲಿ ರಗ್ಗು, ಕಂಬಳಿಗೆ ಮೊರೆ ಹೋಗಿದ್ದಾರೆ 

    ಜಿಲ್ಲೆಯಲ್ಲಿ ಮೇ 18 ರಿಂದ 20ರವರೆಗೆ ಬಿಡುವಿಲ್ಲದೆ ಮಳೆಯಾಗಿದ್ದು 24 ಮನೆಗಳು ಭಾಗಶಃ ಹಾನಿಗೊಳಗಾಗಿವೆ ಹಾಗೂ ತಾಲ್ಲೂಕಿನ ಬಂಟನೂರು ಹಾಗೂ ಮಿರ್ಜಿ ಗ್ರಾಮದಲ್ಲಿ ತೋಟದಲ್ಲಿರುವ ಎರಡು ಜಾನುವಾರಗಳು ಪ್ರಾಣ ಕಳೆದುಕೊಂಡಿವೆ ಈ ಕುರಿತು ನಮ್ಮ ಅಧಿಕಾರಿಗಳು ಮಾಹಿತಿ ಸಂಗ್ರಹ ಮಾಡಿಕೊಳ್ಲುತ್ತಿದ್ದಾರೆ ಎಂದು ತಹಸೀಲ್ದಾರ ಮಹೇಶ ಪಾಂಡವ್ ತಿಳಿಸಿದ್ದಾರೆ.  

     ನಿರಂತರವಾಗಿ ಸುರಿಯುತ್ತಿರುವ ವರ್ಷಧಾರೆ ರೈತರ ಕೃಷಿ ಚಟುವಟಿಕೆಗಳಿಗೆ ತಣ್ಣಿರು ಎರಚಿದೆ. ಮಳೆ ಬಂದರೆ ಸಾಕೆಂದುಕೊಳ್ಳುತ್ತಿದ್ದ ಅನ್ನದಾತ ನಿರಂತರವಾಗಿ ಸುರಿಯುವ ಮೂಲಕ ಬಿತ್ತನೆಪೂರ್ವ ಚಟುವಟಿಕೆಗಳನ್ನು  ಮಾಡದ ಜಮೀನುಗಳಲ್ಲಿ ಅಪಾರ ಪ್ರಮಾಣದ ಮಳೆಯ ನೀರು ಸಂಗ್ರಹವಾಗಿದೆ. ಇದರಿಂದ ಮಳೆ ನಿಂತು ಬಹಳ ದಿನಗಳವರೆಗೆ ಜಮೀನುಗಳಿಗೆ ಇಳಿಯದ ಸ್ಥಿತಿ ನಿರ್ಮಾಣವಾಗಿದೆ. ಇನ್ನೂ ಕೆಲವರು ಮುಂಗಾರು ಬಿತ್ತನೆಯಾಗಿ ಅರಿಸಿನ,ಸೊಯಾಬೀನ್ ನಾಟಿ ಮಾಡಿದ್ದು ಅಲ್ಲಿ ಕೂಡ ನೀರು ನಿಂತಿದ್ದು ಬೀಜ ಕೊಳೆತು ಹೋಗುವ ಭಯ ಕೆಲವು ರೈತರಲ್ಲಿದೆ. ಕಬ್ಬು ಬೆಳೆದ ರೈತರು ಮಾತ್ರ ಈ ಆತಂಕದಿಂದ ದೂರವಿದ್ದಾರೆ.ಕಾರಣ ಈ ಮೆಳೆ ಕಬ್ಬಿಗೆ ಖುಷಿ ತಂದಂತಾಗಿದೆ.ಮುಂಗಾರು ಹಂಗಾಮಿನಲ್ಲಿ ಹೆಸರು, ಸೂರ್ಯಕಾಂತಿ, ಸಜ್ಜೆ ಬಿತ್ತನೆಗಾಗಿ ರೈತರು ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ಬೀಜ ಮತ್ತು ಗೊಬ್ಬರ ಖರೀದಿಯಲ್ಲಿ ತೊಡಗಿದ್ದು, ಜನರ ಸಂಚಾರಕ್ಕೆ, ವ್ಯಾಪಾರ ವಹಿವಾಟಿಗೆ ಒಂದಿಷ್ಟು ಅಡಚಣೆಯಾಗಿದ್ದರೂ ಧಾರಾಕಾರವಾಗಿ ಸುರಿದ ಮಳೆ ಎಲ್ಲೆಡೆ ಖುಷಿ ತಂದಿದೆ.  

ತರಕಾರಿ ಮಾರುಕಟ್ಟೆಗೆ ನುಗ್ಗಿದ ನೀರು :ಜಿಟಿಜಿಟಿ ಮಳೆಗೆ ಪ್ರಮುಖ ಬೀದಿಗಳಲ್ಲಿನ ರಸ್ತೆಗಳು ಕೆಸರು ಮಯವಾಗಿದ್ದು ಸಂಚರಿಸಲು ಸಾಧ್ಯವಾಗುತ್ತಿಲ್ಲ. ರಸ್ತೆಬದಿಯ ತಗ್ಗು ಪ್ರದೇಶಗಳಲ್ಲಿ ನೀರು ನಿಂತುಕೊಂಡಿದೆ. ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ವಾಹನ ಸವಾರರು ಪರದಾಡುವ ಸಂದರ್ಭದಲ್ಲಿ ಅಪಾರ ಪ್ರಮಾಣದಲ್ಲಿ ನುಗ್ಗಿದ ನೀರು ಇಲ್ಲಿನ ನಗರಸಭೆಯ ಹತ್ತಿರದ ತರಕಾರಿ ಮಾರುಕಟ್ಟೆಗೆ ನುಗ್ಗಿ ವ್ಯಾಪಾರಿಗಳಿಗೆ ಅಪಾರ ಹಾನಿ ಉಂಟು ಮಾಡಿದೆ 

ಸರಿದ ಘಟಪ್ರಭೆ:ನಿರಂತರವಾಗಿ ಸುರಿದ ಮಳೆಯಿಂದಾಗಿ ಘಟಪ್ರಭೆ ಸಹ ಉಕ್ಕಿ ಹರಿದ ಪರಿಣಾಮ ಶುಕ್ರವಾರ ರಾತ್ರಿ ಮಿರ್ಜಿ ಬ್ಯಾರೇಜ್ ಮೇಲೆ ನೀರು ಬಂದ ಪರಿಣಾಮ ರಸ್ತೆ ಸ್ಥಗಿತಗೊಳಿಸಿದ್ದರು ಇಂದು ನೀರು ಸರಿದ ಕಾರಣ ಮತ್ತೆ ಮಾರ್ಗ ಪ್ರಾರಂಭವಾಗಿದೆ _.ಜೊತೆಗೆ ಯಡಹಳ್ಳಿ ಹತ್ತಿರದ ಮಡಿಹಳ್ಳಿ ರಸ್ತೆ ಸಹ ನಿರ್ಮಾಣ ಕಾರ್ಯವಾಗಿದ್ದರಿಂದ ರಸ್ತೆ ಸ್ಥಗಿತಗೊಂಡಿದ್ದು ಬೇರೆ ಮಾರ್ಗದ ಮೂಲಕ ಜನರು ನಗರಕ್ಕೆ ಪ್ರಯಾಣ ಬೆಳೆಸುತ್ತಿದ್ದಾರೆ. 

ಬೆಳೆ ಹಾನಿ; ತಾಲ್ಲೂಕಿನ ಉತ್ತೂರ ಗ್ರಾಮದ ಹನಮಂತ ಮಳಲಿ ಅವರ  1 ಎಕರೆ ಹಾಗೂ ಜಾಲಿಬೇರ ಗ್ರಾಮದ  ಯಲ್ಲಪ್ಪ ಕಂಕನವಾಡಿ ಅವರ ಎರಡು ಎಕರೆ ತೋಟದಲ್ಲಿ ಬೆಳೆದ ಕಲ್ಲಂಗಡಿ ಬೆಳೆ ಸಂಪೂರ್ಣವಾಗಿ ನಾಶವಾಗಿದ್ದು ಶಿರೋಳದ ಸಂಗಣ್ಣವರ ತೋಟದಲ್ಲಿ ಬೆಳೆದ ಎರಡು ಎಕರೆ ಬಾಳೆ ಹಾನಿಯಾಗಿದ್ದು ಈ ಕುರಿತು ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ಧೇಶಕ ಮಹೇಶ ದಂಡನ್ನವರ ಸ್ಥಳ ಪರೀಶೀಲನೆ ಮಾಡಲು ಕ್ರಮ ಕೈಗೊಂಡಿದ್ದಾರೆ. 


ಸುದ್ದಿ ಓದಿ