ಅಫ್ಗಾನಿಸ್ತಾನದಲ್ಲಿ ಉಳಿದಿರುವರೊಂದಿಗೆ ನಿರಂತರ ಸಂಪರ್ಕ; ಅಮೆರಿಕ
ವಾಷಿಂಗ್ಟನ್, ಸೆ 1 ಅಫ್ಗಾನಿಸ್ತಾನದಿಂದ ಸೇನೆಯನ್ನು ಹಿಂಪಡೆದ ನಂತರ ಅಲ್ಲಿ ಉಳಿದಿರುವ ಪ್ರಜೆಗಳಿಗೆ ತಮ್ಮೊಂದಿಗೆ ಸಂಪರ್ಕದಲ್ಲಿರುವುದು ಹೇಗೆ ಎಂಬ ಮಾಹಿತಿ ಒದಗಿಸಲಾಗಿದೆ ಎಂದು ಅಮೆರಿಕದ ವಿದೇಶಾಂಗ ಇಲಾಖೆ ವಕ್ತಾರ ನೆಡ್ ಪ್ರೈಸ್ ತಿಳಿಸಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸದ್ಯ ಅಫ್ಗಾನಿಸ್ತಾನದಲ್ಲಿ 100ಕ್ಕಿಂತ ಕಡಿಮೆ ಅಮೆರಿಕನ್ನರು ಉಳಿದಿದ್ದಾರೆ. ಅವರೊಂದಿಗೆ ಅಮೆರಿಕ ಸಂಪರ್ಕದಲ್ಲಿದೆ. ಅವರಲ್ಲಿ ಕೆಲವರು ಅಲ್ಲಿಯೇ ಇರಲು ನಿರ್ಧರಿಸಿದರು ಮತ್ತು ಕೆಲವರನ್ನು ಸ್ಥಳಾಂತರಿಸಲು ಸಾಧ್ಯವಾಗಲಿಲ್ಲ ಎಂದರು.
ಇಂದು, ನಾಳೆ ಅಥವಾ ಒಂದು ವರ್ಷದ ನಂತರ ಕೂಡ ತಮ್ಮ ಮನಸ್ಸನ್ನು ಬದಲಾಯಿಸಿಕೊಂಡು ಮರಳಲು ಬಯಸುವವರಿಗೆ ತಮ್ಮನ್ನು ಸಂಪರ್ಕಿಸಲು ಮಾರ್ಗದರ್ಶನ ನೀಡಿದ್ದೇವೆ. ಅಲ್ಲಿಂದ ನಿರ್ಗಮಿಸಲು ಬಯಸುವ ವುದೇ ಅಮೆರಿಕನ್ನರನ್ನು ಕರೆತರುವ ಪ್ರತಿಯೊಂದು ಸಂಭಾವ್ಯ ಆಯ್ಕೆಯನ್ನು ನಾವು ಪರಿಶೀಲಿಸುತ್ತಿದ್ದೇವೆ ಎಂದು ತಿಳಿಸಿದರು.
ಅಮೆರಿಕ ಮತ್ತು ಸಮ್ಮಿಶ್ರ ಪಡೆಗಳು ಅಫ್ಗಾನಿಸ್ತಾನದಿಂದ ಇಲ್ಲಿಯವರೆಗೆ 1,23,000 ಕ್ಕೂ ಹೆಚ್ಚು ನಾಗರಿಕರನ್ನು ಸ್ಥಳಾಂತರಿಸಿದೆ ಮತ್ತು ಅವರಲ್ಲಿ 6,000 ಕ್ಕಿಂತಲೂ ಹೆಚ್ಚು ಅಮೆರಿಕ ನಾಗರಿಕರು ಎಂದು ಸೆಂಟ್ರಲ್ ಕಮಾಂಡ್ ಮುಖ್ಯಸ್ಥ ಕೆನ್ನೆತ್ ಮೆಕೆಂಜಿ ಮಾಹಿತಿ ನೀಡಿದ್ದಾರೆ.
ಅಮೆರಿಕ ಅಫ್ಗಾನಿಸ್ತಾನದಲ್ಲಿ ನಿಯೋಜಿಸಿದ್ದ ಸೇನೆಯನ್ನು ಹಿಂಪಡೆಯುವ ಪ್ರಕ್ರಿಯೆ ಆ.30ರಂದು ಪೂರ್ಣಗೊಳಿಸಿದ್ದು, ಈ ಮೂಲಕ ಆ ದೇಶದೊಂದಿಗಿನ 20 ವರ್ಷಗಳ ಯುದ್ಧವನ್ನು ಕೊನೆಗೊಳಿಸಿತು.