ಸರಕಾರದ ಕಾಲಮಿತಿಯೊಳಗೆ ಯೋಜನೆಗಳನ್ನು ಪೂರ್ಣಗೊಳಿಸಿ: ಕುಲಕರ್ಣಿ
ಲೋಕದರ್ಶನ ವರದಿ
ಶಿರಹಟ್ಟಿ 31: ತಾಲೂಕಿನ ಇಟಗಿ ಗ್ರಾಮದಲ್ಲಿ 2023-24ನೇ ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ. ಹಾಗೂ 14 ಮತ್ತು 15ನೇ ಹಣಕಾಸು ಯೋಜನೆಯ ಸಾಮಾಜಿಕ ಪರಿಶೋಧನೆಯ ಗ್ರಾಮ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಶರಣಯ್ಯ ಕುಲಕರ್ಣಿ ಮಾತನಾಡಿದರು.
ಅವರು ತಾಲೂಕಿನ ಇಟಗಿ ಗ್ರಾಮದಲ್ಲಿ ಗ್ರಾಮ ಸಭೆಯನ್ನುದ್ದೇಶಿಸಿ ಮಾತನಾಡಿ, ಗ್ರಾಮ ಪಂಚಾಯತಿಯ ಅಧಿಕಾರಿಗಳು ಸರಕಾರದ ಯೋಜನೆಗಳನ್ನು ನಿಯಮಾನುಸಾರ ನಿಗದಿತ ಅವಧಿಯೊಳಗೆ ಅನುಷ್ಠಾನಗೊಳಿಸಿ ಸಾರ್ವಜನಿಕರಿಗೆ ಸರಕಾರದ ಸೌಲಭ್ಯಗಳು ಸಕಾಲದಲ್ಲಿ ಒದಗಿಸಿ ಗ್ರಾಮದ ಅಭಿವೃದ್ಧಿಗೆ ಶ್ರಮಿಸುವಂತೆ ತಿಳಿಸಿದರು.
ಗ್ರಾಮದಲ್ಲಿ ಸ್ಚಚ್ಚತೆಯನ್ನು ಕಾಪಾಡಿಕೊಂಡು ರೋಗ ರುಜಿನಿಗಳು ಹರಡದಂತೆ ಕ್ರಮವಹಿಸಲು ಹಾಗೂ ಪ್ರಸ್ತುತ ಬರಗಾಲ ಇರುವುದರಿಂದ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಗ್ರಾಮದ ಜನರಿಗೆ ಉದ್ಯೋಗ ನೀಡಿ ಅವರ ಜೀವನ ನಿರ್ವಹಣೆಗೆ ಅನುಕೂಲ ಮಾಡಿ ಕೊಡುವಂತೆ ಸಭಾಧ್ಯಕ್ಷರು ಗ್ರಾಮ ಸಭೆಯಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.
ಗ್ರಾಮ ಪಂಚಾಯತಿ ಅಧ್ಯಕ್ಷ ಗಂಗಾ ಹುಲ್ಲೂರ, ಉಪಾಧ್ಯಕ್ಷ ಮೃತ್ಯುಂಜಯ ಸೂರಣಗಿಮಠ, ಸದಸ್ಯರಾದ ರೇಖಾ ಅಳವಂಡಿ, ಸುಶೀಲವ್ವ ಛಬ್ಬಿ, ಬಸಪ್ಪ ಬಾರಕೇರ, ದ್ಯಾಮವ್ವ ನಡುವಿನಕೇರಿ, ಕೃಷಿ ಇಲಾಖೆಯ ಅಧಿಕಾರಿಗಳು, ಅರಣ್ಯ ಇಲಾಖೆಯ ಅಧಿಕಾರಿಗಳು, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಅಮರೇಶ ಲಮಾಣಿ, ಗ್ರಾಮ ಪಂಚಾಯತಿ ಸಿಬ್ಬಂದಿಗಳು, ಅಂಗನವಾಡಿ ಶಿಕ್ಷಕಿಯರು, ಇಟಗಿ ಹಾಗೂ ಸಾಸಲವಾಡ ಗ್ರಾಮದ ಸಾರ್ವಜನಿಕರು ಭಾಗವಹಿಸಿದ್ದರು.