ಕಾಮನ್ ವೆಲ್ತ್ ಗೇಮ್ಸ್; ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಚಿನ್ನ ಗೆದ್ದ ಲಕ್ಷ್ಯಸೇನ್
ಬರ್ಮಿಂಗ್ ಹ್ಯಾಮ್: ಆಗಸ್ಟ್ 08 :ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಸೋಮವಾರ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಭಾರತದ ಚಿನ್ನದ ಬೇಟೆ ಜೋರಾಗಿದೆ. ಉದಯೋನ್ಮುಖ ತಾರೆ ಲಕ್ಷ್ಯ ಸೇನ್ ಅವರು ಮಲೇಷ್ಯಾದ ಟ್ಜೆ ಯೋಂಗ್ ಎನ್ಜಿ ವಿರುದ್ಧ ಪುರುಷರ ಸಿಂಗಲ್ಸ್ ಫೈನಲ್ನಲ್ಲಿ ಗೆದ್ದು ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ. ಲಕ್ಷ್ಯ ಸೇನ್ , ಟ್ಜೆ ಯೋಂಗ್ ಎನ್ಜಿ ಅವರನ್ನು 19-21, 21-9, 21-16 ಸೆಟ್ ಗಳಿಂದ ಸೋಲಿಸಿದರು. ವಿಶ್ವ ಚಾಂಪಿಯನ್ಶಿಪ್ನಲ್ಲಿ ಕಂಚಿನ ಪದಕವನ್ನು ಗೆದ್ದಿದ್ದ ಯುವ ಆಟಗಾರ ಯೂತ್ ಒಲಿಂಪಿಕ್ ಗೇಮ್ಸ್ ಬೆಳ್ಳಿ ಪದಕ ವಿಜೇತರಾಗಿದ್ದು, ಈ ವರ್ಷದ ಆರಂಭದಲ್ಲಿ ಭಾರತದ ಐತಿಹಾಸಿಕ ಥಾಮಸ್ ಕಪ್ ಗೆಲುವಿನಲ್ಲಿ ದೊಡ್ಡ ಪಾತ್ರವನ್ನು ವಹಿಸಿದ್ದರು.
ಲಕ್ಷ್ಯಸೇನ್ ಗೂ ಮೊದಲು ಮಹಿಳೆಯರ ಸಿಂಗಲ್ಸ್ ನಲ್ಲಿ ಚಿನ್ನದ ಪದಕ ಗೆದ್ದ ಪಿ.ವಿ ಸಿಂಧು ಕೆನಡಾದ ಮಿಚೆಲ್ ಲಿ ಅವರನ್ನು 21-15, 21-13 ನೇರ ಸೆಟ್ ಗಳಿಂದ ಸೋಲಿಸಿದರು.
ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಇತಿಹಾಸ ಸೃಷ್ಟಿಸಿದ ಪಿ.ವಿ. ಸಿಂಧು ಅವರನ್ನು ಪ್ರಧಾನಿ ಮೋದಿ ಅಭಿನಂದಿಸಿದ್ದು, ಪಿ.ವಿ ಸಿಂಧು ಅವರು ಚಾಂಪಿಯನ್ಗಳ ಚಾಂಪಿಯನ್ ಆಗಿದ್ದಾರೆ. ಶ್ರೇಷ್ಠತೆ ಏನೆಂದು ಅವರು ಪದೇ ಪದೇ ತೋರಿಸುತ್ತಾರೆ. ಆಕೆಯ ಸಮರ್ಪಣೆ ಮತ್ತು ಬದ್ಧತೆ ವಿಸ್ಮಯಕಾರಿಯಾಗಿದೆ. ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಚಿನ್ನದ ಪದಕ ಗೆದ್ದಿದ್ದಕ್ಕಾಗಿ ಆಕೆಗೆ ಅಭಿನಂದನೆಗಳು. ಆಕೆಯ ಮುಂದಿನ ಪ್ರಯತ್ನಗಳಿಗೆ ಶುಭ ಹಾರೈಸುತ್ತೇನೆ ಎಂದಿದ್ದಾರೆ.