ಕ್ರೀಡೆ

ಕಾಮನ್ ವೆಲ್ತ್ ಗೇಮ್ಸ್; ಚಿನ್ನದ ಪದಕ ಗೆದ್ದ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು

ಕಾಮನ್ ವೆಲ್ತ್ ಗೇಮ್ಸ್; ಚಿನ್ನದ ಪದಕ ಗೆದ್ದ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು

ಬರ್ಮಿಂಗ್ ಹ್ಯಾಮ್ : ಆಗಸ್ಟ್ 08: ಕಾಮನ್ ವೆಲ್ತ್ ನಲ್ಲಿ ಭಾರತದ ಪದಕ ಬೇಟೆ ಮುಂದುವರಿದಿದ್ದು ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ತಾಯ್ನಾಡಿಗೆ ಚಿನ್ನದ ಪದಕ ತಂದುಕೊಟ್ಟಿದ್ದಾರೆ.

ಮಹಿಳಾ ಸಿಂಗಲ್ಸ್ ಬ್ಯಾಡ್ಮಿಂಟನ್ ಫೈನಲ್‌ನಲ್ಲಿ ಕೆನಡಾದ ಮಿಚೆಲ್ ಲಿ ಅವರನ್ನು 21-15, 21-13 ರಿಂದ ಸೋಲಿಸಿ ಬಹು-ಕ್ರೀಡಾ ಸ್ಪರ್ಧೆಯಲ್ಲಿ ಸಿಂಗಲ್ಸ್ ನಲ್ಲಿ ತಮ್ಮ ಮೊದಲ ಚಿನ್ನದ ಪದಕವನ್ನು ಗೆದ್ದರು.

ಸಿಂಧು ಇದುವರೆಗೆ ಭಾರತದ ಸಿಂಗಲ್ಸ್ ನಲ್ಲಿ ಹೆಚ್ಚು ಸಾಧನೆ ಮಾಡಿರುವ ಆಟಗಾರ್ತಿಯಾಗಿದ್ದು  ಫೈನಲ್‌ನಲ್ಲಿ ಕೆನಡಾದ ಎದುರಾಳಿಯ ವಿರುದ್ಧ ಸ್ವಲ್ಪ ಕಷ್ಟಪಟ್ಟರು. ಮೊದಲ ಗೇಮ್‌ನಲ್ಲಿ ಮಿಚೆಲ್ ನೆಟ್‌ನ ಹತ್ತಿರ ಆಡುವ ಮೂಲಕ ಪಾಯಿಂಟ್‌ಗಳನ್ನು ಪಡೆಯಲು ಪ್ರಯತ್ನಿಸುತ್ತಿದ್ದರೆ ಸಿಂಧು ಹೆಚ್ಚು ಆಕ್ರಮಣಕಾರಿ ಆಟವಾಡಿದರು. ವಿರಾಮದ ನಂತರ ಸಿಂಧು ಮೂರು ನೇರ ಅಂಕಗಳನ್ನು ಪಡೆದು ಅಂತಿಮವಾಗಿ ಗೆಲುವುದನ್ನ ದಾಖಲಿಸಿದರು.

“ನಾನು ಈ ಚಿನ್ನಕ್ಕಾಗಿ ಬಹಳ ಸಮಯದಿಂದ ಕಾಯುತ್ತಿದ್ದೆ ಮತ್ತು ಅಂತಿಮವಾಗಿ ನಾನು ಅದನ್ನು ಪಡೆದುಕೊಂಡಿದ್ದೇನೆ. ನನಗೆ ತುಂಬಾ ಸಂತೋಷವಾಗಿದೆ. ಪ್ರೇಕ್ಷಕರಿಗೆ ಧನ್ಯವಾದಗಳು ಎಂದು ಫೈನಲ್ ನಂತರ ಸಿಂಧು ಹೇಳಿದರು.

ಮಾಜಿ ವಿಶ್ವ ಚಾಂಪಿಯನ್ ಮತ್ತು ಎರಡು ಬಾರಿ ಒಲಿಂಪಿಕ್ ಪದಕ ವಿಜೇತೆ, ಸಿಂಧು ಕಳೆದ ಕಾಮನ್‌ವೆಲ್ತ್ ಗೇಮ್ಸ್ ನಲ್ಲಿ ಸಿಂಗಲ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು ಮತ್ತು 2018 ರಲ್ಲಿ ಏಷ್ಯನ್ ಗೇಮ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ಅವರು 2016 ರ ರಿಯೊ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಮತ್ತು ಟೋಕಿಯೊ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಗಳಿಸಿದ್ದರು.

ಪಿ.ವಿ. ಸಿಂಧು 2018ರ ಸಿಡಬ್ಲ್ಯೂಜಿಯ ಮಿಶ್ರ ತಂಡ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದರು. ಅವರು 2014 ರ ಸಿಡಬ್ಲ್ಯೂಜಿ ಮಹಿಳಾ ಸಿಂಗಲ್ಸ್ ನಲ್ಲಿ ಕಂಚಿನ ಪದಕವನ್ನು ಗೆದ್ದಿದ್ದರು.

ಸುದ್ದಿ ಓದಿ