ಪುರಾತನ ಹಸ್ತಪ್ರತಿ, ದಾಖಲೆಗಳನ್ನು ಸಂಗ್ರಹಿಸಿ, ದಾಖಲಿಸಿ: ಅಪರ ಜಿಲ್ಲಾಧಿಕಾರಿ

ಪುರಾತನ ಹಸ್ತಪ್ರತಿ, ದಾಖಲೆಗಳನ್ನು ಸಂಗ್ರಹಿಸಿ, ದಾಖಲಿಸಿ: ಅಪರ ಜಿಲ್ಲಾಧಿಕಾರಿ Collect and document ancient manuscripts and documents: Additional District Magistrate

ಲೋಕದರ್ಶನ ವರದಿ 

ಕಾರವಾರ, ಏ.9 :- ಜಿಲ್ಲೆಯಲ್ಲಿ ಲಭ್ಯವಿರುವ ಶತಮಾನಗಳಷ್ಟು ಹಳೆಯ ಹಸ್ತಪ್ರತಿಗಳು, ದಾಖಲೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿ, ಅವುಗಳನ್ನು ರಕ್ಷಿಸಿ, ವ್ಯವಸ್ಥಿತ ರೀತಿಯಲ್ಲಿ ದಾಖಲೀಕರಣಗೊಳಿಸಲು ಕ್ರಮ ಕೈಗೊಳ್ಳುವಂತೆ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಸೂಚಿಸಿದರು.  ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ, ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

ಪುರಾತತ್ವ ಇಲಾಖೆ ವತಿಯಿಂದ ರಾಜ್ಯದಲ್ಲಿನ ಹಳೆಯ ಹಸ್ತಪ್ರತಿಗಳು, ದಾಖಲೆಗಳನ್ನು ಸಂಗ್ರಹಿಸುವ ಮೂಲಕ ನಮ್ಮ ಪ್ರಾಚೀನ ಪರಂಪರೆ, ಇತಿಹಾಸವನ್ನು ಮುಂದಿನ ಪೀಳಿಗೆಗೆ ತಲುಪಿಸುವ ಉದ್ದೇಶದಿಂದ ಅವುಗಳನ್ನು  ವೈಜ್ಞಾನಿಕವಾಗಿ ಡಿಜಟಲೈಸೇಷನ್ ಮಾಡುವ ಕಾರ್ಯ ನಡೆಯುತ್ತಿದ್ದು, ನಮ್ಮ ಜಿಲ್ಲೆಯಲ್ಲಿ ಪ್ರಸಿದ್ದ ರಾಜ ಮನೆತನಗಳ ಉಗಮ, ಆಳ್ವಿಕೆ, ಧಾರ್ಮಿಕ ಪರಂಪರೆಗಳ ಆಚರಣೆಗಳನ್ನು ಒಳಗೊಂಡ ವೈಭವದ ಇತಿಹಾಸವಿದ್ದು, ಈ ಬಗ್ಗೆ ಹಸ್ತಪ್ರತಿಗಳಲ್ಲಿ ಹೆಚ್ಚಿನ ದಾಖಲೆಗಳ ಇರುವ ಸಾಧ್ಯತೆಗಳಿದ್ದು, ಇಂತಹ ದಾಖಲೆಗಳ ಬಗ್ಗೆ ಮಾಹಿತಿಗಳನ್ನು ಸಂಗ್ರಹಿಸುವಂತೆ ತಿಳಿಸಿದರು.  

ಜಿಲ್ಲೆಯಲ್ಲಿರುವ ಐತಿಹಾಸಿಕ ಪ್ರದೇಶಗಳಲ್ಲಿ, ಧಾರ್ಮಿಕ ಸ್ಥಳಗಳಲ್ಲಿ, ಬಸದಿಗಳಲ್ಲಿ ಹಸ್ತಪ್ರತಿಗಳು ಇರುವ ಸಾಧ್ಯತೆಗಳಿದ್ದು, ಈ ಬಗ್ಗೆ ಸ್ಥಳೀಯ ಜನತೆಯನ್ನು ಸಂಪರ್ಕಿಸಿ, ಅವರಿಂದ ಮಾಹಿತಿ ಪಡೆಯುವಂತೆ ಮತ್ತು ಲಭ್ಯ ದಾಖಲೆಗಳನ್ನು ವಾರೀಸುದಾರರಿಂದ ಪಡೆದು, ಅವುಗಳ ಮೂಲ ಅಸ್ಥಿತ್ವಕ್ಕೆ ಯಾವುದೇ ಹಾನಿಯಾಗದಂತೆ, ಅವುಗಳನ್ನು ಡಿಜಿಟಲೈಸ್ ಮಾಡಿ, ಪುನಃ ಅವರಿಗೆ ಹಿಂದಿರುಗಿಸುವಂತೆ ಮತ್ತು ಒಂದೊಮ್ಮೆ ಅವರು ಶಾಶ್ವತವಾಗಿ ಸರಕಾರಕ್ಕೆ ನೀಡುವ ಒಪ್ಪಿಗೆ ನೀಡಿದಲ್ಲಿ ಸ್ವೀಕರಿಸುವಂತೆ ತಿಳಿಸಿದರು. 

 ಪ್ರಾಚೀನ ಹಸ್ತಪ್ರತಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಸ್ಕೃತ ಭಾಷೆಯಲ್ಲಿ ಇರುವ ಸಾಧ್ಯತೆಗಳಿದ್ದು, ಇಂತಹ ಹಸ್ತಪ್ರತಿಗಳ ಬಗ್ಗೆ ಪದವಿ ಪೂರ್ವ ಕಾಲೇಜುಗಳ ಸಂಸ್ಕೃತ ಅಧ್ಯಾಪಕರಿಗೆ ಮಾಹಿತಿ ಇದ್ದಲ್ಲಿ ಅವುಗಳನ್ನು ಸಂಗ್ರಹಿಸುವಂತೆ ಮತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳ ಮೂಲಕ ಪೋಷಕರಿಗೆ ಅವರ ಮನೆಗಳಲ್ಲಿ ಇಂತಹ ಹಸ್ತಪ್ರತಿಗಳು ಇದ್ದಲ್ಲಿ ಮಾಹಿತಿ ನೀಡುವಂತೆ ತಿಳಿಸಿ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. 

 ಜಿಲ್ಲೆಯಲ್ಲಿ ಪುರಾತನ ಹಸ್ತಪ್ರತಿಗಳು ದೊರೆಯುವ ಸಾಧ್ಯತೆಯಿರುವ ಐತಿಹಾಸಿಕ ಪ್ರದೇಶಗಳು, ಧಾರ್ಮಿಕ ಸ್ಥಳಗಳು ಮತ್ತು ಬಸದಿಗಳಿಗೆ, ಮುಜರಾಯಿ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಗ್ರಂಥಾಲಯ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡ ತಂಡ ಭೇಟಿ ನೀಡಿ ಪರೀಶೀಲಿಸಿ ವರದಿ ನೀಡುವಂತೆ ನಿರ್ದೇಶನ ನೀಡಿದರು. 

ಜಿಲ್ಲೆಯ ಸಾರ್ವಜನಿಕರು ತಮ್ಮ ಮನೆಗಳಲ್ಲಿ ಪುರಾತನ ಹಸ್ತಪ್ರತಿಗಳಿದ್ದಲ್ಲಿ ಅವುಗಳ ಕುರಿತು ಮುಜರಾಯಿ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ತಿಳಿಸಿದ ಅವರು, ಸಾರ್ವಜನಿಕರು ನೀಡುವ ಹಸ್ತಪ್ರತಿಗಳನ್ನು ಸಂಗ್ರಹಿಸಿ, ಅವುಗಳಿಗೆ ಯಾವುದೇ ಹಾನಿಯಾಗದಂತೆ ಡಿಜಿಟಲೈಸ್ ಮಾಡಿ ಪುನ: ಸಂಬಂಧಪಟ್ಟವರಿಗೆ ಹಿಂದಿರುಗಿಸಲಾಗುವುದು ಎಂದರು.  

ಸಭೆಯಲ್ಲಿ ವರ್ಚುವಲ್ ಮೂಲಕ ಹಾಜರಿದ್ದ ಸ್ವರ್ಣವಲ್ಲಿ ಮಠದ ಡಾ.ಕೃಷ್ಣ ಜೋಷಿ ಮತ್ತು ಗೋಕರ್ಣ ಸಂಸ್ಕೃತ ಕಾಲೇಜಿನ ಪ್ರಾಂಶುಪಾಲರು ತಮ್ಮ ಮಠಗಳು ಮತ್ತು ಕಾಲೇಜು ವ್ಯಾಪ್ತಿಯಲ್ಲಿಯೂ ಪುರಾತನ ತಾಳೆಗರಿಯ ಹಸ್ತಪ್ರತಿಗಳಿದ್ದು ಇವುಗಳನ್ನು ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರೀಶೀಲಿಸಬಹುದು ಎಂದರು.  

ಸಭೆಯಲ್ಲಿ ವರ್ಚುವಲ್ ಮೂಲಕ ಬೆಂಗಳೂರಿನ ಪುರಾತತ್ವ ಇಲಾಖೆಯ ನಿರ್ದೇಶಕಿ ಸ್ಮಿತಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಮಂಗಲಾ ನಾಯ್ಕ, ಮುಜರಾಯಿ ಇಲಾಖೆ ಸಹಾಯಕ ಆಯುಕ್ತೆ ಸುಧಾ ಎಸ್ ತಳವಾರ್, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸತೀಶ್ ನಾಯ್ಕ ಮತ್ತಿತರರು ಇದ್ದರು.