ಅಂತರರಾಷ್ಟ್ರೀಯ

ಬ್ರೆಜಿಲ್ : ಚೀನಾದ ಕೋವಿಡ್ ಲಸಿಕೆ ಪ್ರಯೋಗ ಪುನಾರಂಭ

ಬ್ರೆಜಿಲ್ : ಚೀನಾದ ಕೋವಿಡ್ ಲಸಿಕೆ ಪ್ರಯೋಗ ಪುನಾರಂಭ

ಬ್ರಸಿಲಿಯಾ, ನವೆಂಬರ್ 12:  ದೇಶದಲ್ಲಿ ಕೆಲವು ದಿನಗಳ ಹಿಂದೆ ಸ್ಥಗಿತಗೊಂಡಿದ್ದ ಚೀನಾದ ಕೊರೋನಾ ವೈರಸ್ ಲಸಿಕೆಯ ಪ್ರಯೋಗವನ್ನು ಪುನರಾರಂಭಿಸಲಾಗುವುದು ಎಂದು ಬ್ರೆಜಿಲ್ ನ ಆರೋಗ್ಯ ನಿಯಂತ್ರಕ ಪ್ರಕಟಿಸಿದೆ. 

ಚೀನಾದ ಲಸಿಕೆ ಪ್ರಯೋಗಕ್ಕೆ ಒಡ್ಡಿಕೊಂಡಿದ್ದವರ ಮೇಲಾದ ಪ್ರತಿಕೂಲ ಪರಿಣಾಮ ಹಾಗೂ ಓರ್ವ ವ್ಯಕ್ತಿಯ ಸಾವಿನ ಬಳಿಕ ಪ್ರಯೋಗ ನಿಲ್ಲಿಸಲು ಅನ್ವಿಸಾ ಹೆಸರಿನ ಸಂಸ್ಥೆ ನಿರ್ಧರಿಸಿತ್ತು ಎಂದು ಬಿಬಿಸಿ ವರದಿ ಮಾಡಿದೆ. ಪ್ರಯೋಗಕ್ಕೆ ಒಡ್ಡಿಕೊಂಡಿದ್ದ ವ್ಯಕ್ತಿಯ ಸಾವಿಗೂ, ಲಸಿಕೆಗೂ ಸಂಬಂಧವಿಲ್ಲ.  ಹೀಗಾಗಿ ಲಸಿಕಾ ಪ್ರಯೋಗ ಮತ್ತೆ ಆರಂಭವಾಗಲಿದೆ.  ಅಗತ್ಯವಿದ್ದಲ್ಲಿ ಲಸಿಕೆಯ ಬಗ್ಗೆ ಮತ್ತೆ ತನಿಖೆ ನಡೆಸಬಹುದು ಎಂದು ಸಂಸ್ಥೆಯ ಮುಖ್ಯಸ್ಥರು ಬುಧವಾರ ನೀಡಿರುವ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಆದಾಗ್ಯೂ ಚೀನಾದ ಲಸಿಕೆ ಪ್ರಯೋಗದ ಬಗ್ಗೆ ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸೊನಾರೊ ಈಗಾಗಲೇ ವಿರೋಧ ವ್ಯಕ್ತಪಡಿಸಿದ್ದರು.  ಹಾಗೂ ಲಸಿಕೆ ಪ್ರಯೋಗವನ್ನು ನಿಲ್ಲಿಸಿದ್ದಾಗ ಅದನ್ನು "ವಿಜಯ" ಎಂದು ಘೋಷಿಸಿದ್ದರು. ಅಲ್ಲದೆ ಚೀನಾದ ಲಸಿಕೆಯನ್ನು ತಮ್ಮ ದೇಶ ಖರೀದಿಸುವುದಿಲ್ಲ ಎಂದಿದ್ದರು. 

ಹೀಗಾಗಿ ಆರೋಗ್ಯ ನಿಯಂತ್ರಕವು ಲಸಿಕೆಯ ಪುನರ್ ಪ್ರಯೋಗ ಆರಂಭಿಸುವುದಾಗಿ ನೀಡಿರುವ ಹೇಳಿಕೆಗೆ ಅಧ್ಯಕ್ಷರ ಸಮ್ಮತವಿದೆಯೇ, ಇಲ್ಲವೇ ಎಂಬುದು ಇನ್ನೂ ತಿಳಿದುಬಂದಿಲ್ಲ.

ಈ ಲಸಿಕೆಯನ್ನು ಚೀನಾದ ಸಂಸ್ಥೆ ಸಿನೋವಾಕ್ ಬಯೋಟೆಕ್ ಅಭಿವೃದ್ಧಿಪಡಿಸಿದೆ.  ಜಾಗತಿಕವಾಗಿ ಹಲವು ಹಂತದ ಪರೀಕ್ಷೆಯಾಗಿದ್ದು,   "ಲಸಿಕೆಯ ಸುರಕ್ಷತೆಯ ಬಗ್ಗೆ ವಿಶ್ವಾಸವಿದೆ" ಎಂದು ಸಿನೋವಾಕ್ ಹೇಳಿಕೊಂಡಿದೆ.

ಸುದ್ದಿ ಓದಿ