ಅಜಿತ್ ಧೋವಲ್ ಜೊತೆ ಚೀನಾ ವಿದೇಶಾಂಗ ಸಚಿವ ವಾಂಗ್ ಭೇಟಿ
ಹೊಸದಿಲ್ಲಿ: ಮಾರ್ಚ್ 25: ಸುದೀರ್ಘ ಸಮಯದ ನಂತರ ಭಾರತಕ್ಕೆ ಭೇಟಿ ನೀಡಿರುವ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರು ಇಂದು ಬೆಳಗ್ಗೆ ದೆಹಲಿಯ ಸೌತ್ ಬ್ಲಾಕ್‌ನಲ್ಲಿರುವ ಕಚೇರಿಗೆ ಆಗಮಿಸಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರನ್ನು ಭೇಟಿ ಮಾಡಿದರು. ಇಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರನ್ನೂ ಕೂಡ ವಾಂಗ್ ಯಿ ಭೇಟಿಯಾಗಲಿದ್ದಾರೆ. ಲಡಾಖ್‌ನಲ್ಲಿ ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ (ಎಲ್‌ಎಲ್‌ಎಸಿ) ಉಭಯ ದೇಶಗಳ ಸೇನೆಗಳ ನಡುವೆ ನಡೆಯುತ್ತಿರುವ ಬಿಕ್ಕಟ್ಟಿನ ಕುರಿತು ಚೀನಾ ಮತ್ತು ಭಾರತೀಯ ಅಧಿಕಾರಿಗಳ ನಡುವೆ ನೇರ ಚರ್ಚೆ ನಡೆಯಲಿದೆ.
ಲಡಾಖ್ ಪ್ರಕರಣದಲ್ಲಿ ಇದುವರೆಗೆ ಸೇನಾ ಕಮಾಂಡರ್ ಮಟ್ಟದ 15 ಸುತ್ತುಗಳ ಮಾತುಕತೆಗಳು ನಡೆದಿವೆ, ಆದರೆ ಹಲವು ಪ್ರದೇಶಗಳಲ್ಲಿ ಬಿಕ್ಕಟ್ಟು ಮುಂದುವರಿದಿದೆ. ಕಳೆದ ಎರಡು ವರ್ಷಗಳಲ್ಲಿ ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ಯಾವುದೇ ಚೀನಾದ ನಾಯಕರು ಭಾರತಕ್ಕೆ ಭೇಟಿ ನೀಡಿರಲಿಲ್ಲ. ಈ ಸಂದರ್ಭದಲ್ಲಿ ಎರಡೂ ರಾಷ್ಟ್ರಗಳ ಮಧ್ಯೆ ಲಡಾಖ್ ಬಿಕ್ಕಟ್ಟಿನ ಮೇಲೆ ಉದ್ವಿಗ್ನತೆ ಹೆಚ್ಚಾಯಿತು. ಗಾಲ್ವಾನ್ ಕಣಿವೆಯಲ್ಲಿ ಉಭಯ ದೇಶಗಳ ಸೇನೆಗಳ ನಡುವೆ ಹಿಂಸಾತ್ಮಕ ಘರ್ಷಣೆಗಳೂ ನಡೆದವು. 1962ರ ಯುದ್ಧದ ನಂತರ ಭಾರತ ಮತ್ತು ಚೀನಾ ನಡುವಿನ ಮೊದಲ ಸಂಘರ್ಷ ಇದಾಗಿದೆ.
ಟಿಬೆಟ್ ಸಮಸ್ಯೆಯನ್ನು ಎತ್ತಲು ವಿನಂತಿ
ವಿದೇಶಾಂಗ ಸಚಿವ ವಾಂಗ್ ಯಿ ಭಾರತ ಭೇಟಿ ವೇಳೆ ಟಿಬೆಟ್ ವಿಷಯವನ್ನು ಎತ್ತಬೇಕೆಂದು ಅಲ್ಲಿನ ಸಂಸದ ಥ್ಯುಬಟೆನ್ ಗ್ಯಾತ್ಸೋ ಒತ್ತಾಯಿಸಿದ್ದಾರೆ. ಚೀನಾ ಸರಕಾರವು ದಲೈಲಾಮಾ ಅವರೊಂದಿಗೆ ಮಾತುಕತೆಯನ್ನು ಪ್ರಾರಂಭಿಸಬೇಕು. ಅಲ್ಲದೆ ಟಿಬೆಟ್ ನಲ್ಲಿನ ದಮನಕಾರಿ ನೀತಿಯನ್ನು ಕೊನೆಗೊಳಿಸಬೇಕು ಎಂದು ಅವರು ವಿನಂತಿ ಮಾಡಿಕೊಂಡಿದ್ದಾರೆ.