ಚೀನಾ ರಕ್ಷಣಾ ಬಜೆಟ್‌ನಲ್ಲಿ ಶೇ. 7.1 ರಷ್ಟು ಹೆಚ್ಚಳ: ಭಾರತಕ್ಕಿಂತ 3 ಪಟ್ಟು ಅಧಿಕ!
ಹೊಸದಿಲ್ಲಿ 05 : ಡ್ರ್ಯಾಗನ್ ರಾಷ್ಟ್ರ ತನ್ನ ರಕ್ಷಣಾ ಬಜೆಟ್ ಅನ್ನು ನಿರಂತರವಾಗಿ ಏರಿಕೆ ಮಾಡುತ್ತಿದ್ದು, ಈ ಬಾರಿ ಶೇ.7.1ರಷ್ಟು ಹೆಚ್ಚಿಸಲು ನಿರ್ಧರಿಸಿದೆ. ಕಳೆದ ವರ್ಷ ಚೀನಾದ ರಕ್ಷಣಾ ಬಜೆಟ್ ನಲ್ಲಿ ಶೇ.6.8ರಷ್ಟು ಏರಿಕೆ ಕಂಡಿತ್ತು. ಚೀನಾ ಸರ್ಕಾರವು 2022ರ ಆರ್ಥಿಕ ವರ್ಷಕ್ಕೆ 17.57 ಲಕ್ಷ ಕೋಟಿ (ಸುಮಾರು $ 229.5 ಶತಕೋಟಿ) ರಕ್ಷಣಾ ಬಜೆಟ್ ಅನ್ನು ಪ್ರಸ್ತಾಪಿಸಿದೆ. ಈ ಕರಡು ಬಜೆಟ್ ಅನ್ನು ನ್ಯಾಷನಲ್ ಪೀಪಲ್ಸ್ ಕಾಂಗ್ರೆಸ್ ಅಂದರೆ ಚೀನಾ ಸಂಸತ್ತಿನ ವಾರ್ಷಿಕ ಅಧಿವೇಶನದಲ್ಲಿ ಬಿಡುಗಡೆ ಮಾಡಲಾಗಿದೆ.ಈ ಹೆಚ್ಚಳವು ಭಾರತದ 5.25 ಲಕ್ಷ ಕೋಟಿ (ಸುಮಾರು $ 70 ಶತಕೋಟಿ) ರಕ್ಷಣಾ ಬಜೆಟ್‌ಗಿಂತ ಮೂರು ಪಟ್ಟು ಅಧಿಕಗೊಂಡಂತಾಗಿದೆ. ರಷ್ಯಾ, ಉಕ್ರೇನ್ ಮೇಲೆ ದಾಳಿ ನಡೆಸಿರುವಾಗಲೇ ರಕ್ಷಣಾ ಬಜೆಟ್ ಹೆಚ್ಚಿಸುವ ನಿರ್ಧಾರವನ್ನು ಚೀನಾ ಕೈಗೊಂಡಿದೆ. ಉಭಯ ದೇಶಗಳ ನಡುವೆ ನಡೆಯುತ್ತಿರುವ ಯುದ್ಧಕ್ಕೆ ಇಂದು 10ನೇ ದಿನ. ಈ ಮಧ್ಯೆ, ಅಮೆರಿಕ ಸೇರಿದಂತೆ ಎಲ್ಲಾ ದೇಶಗಳ ತಜ್ಞರು ಈಗ ಮುಂದಿನ ಗುರಿ ತೈವಾನ್ ಆಗಿರಬಹುದು ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಚೀನಾ ಈ ದೇಶದ ಮೇಲೆ ದಾಳಿ ಮಾಡಿ ಯಾವಾಗ ಬೇಕಾದರೂ ವಶಪಡಿಸಿಕೊಳ್ಳುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.
ಭಾರತಕ್ಕೆ ಏಕೆ ಬೆದರಿಕೆ ಇದೆ?
ಚೀನಾದ ರಕ್ಷಣಾ ಬಜೆಟ್ ಭಾರತಕ್ಕಿಂತ ಮೂರು ಪಟ್ಟು ಹೆಚ್ಚಾಗಿರುವುದರಲ್ಲಿ ಯಾವುದೇ ಸಂಶಯವಿಲ್ಲ. ಈಗ ಈ ಹೆಚ್ಚಳದೊಂದಿಗೆ ಭಾರತಕ್ಕೆ ಚೀನಾದಿಂದ ಇನ್ನಷ್ಟು ಅಪಾಯಗಳು ಸೃಷ್ಟಿಯಾಗಬಹುದೆಂಬ ಆತಂಕವೂ ಕೂಡ ಇದೆ. ಲೈನ್ ಆಫ್ ಆ್ಯಕ್ಚುವಲ್ ಕಂಟ್ರೋಲ್ (LAC) ನಲ್ಲಿ ಚೀನಾ ತನ್ನ ಸೇನೆಯನ್ನು ಹೆಚ್ಚಿಸುವ ಸಾಧ್ಯತೆ ಇದೆ. ಈ ಹೆಚ್ಚಿನ ಬಜೆಟ್ ನಿಂದಾಗಿ ಚೀನಾ ಅತ್ಯಾಧುನಿಕ ಹಾಗೂ ಸುಧಾರಿತ ಶಸ್ತ್ರಾಸ್ತ್ರಗಳನ್ನು ಹೊಂದಲು ಸಾಧ್ಯವಾಗುತ್ತದೆ. ಲಡಾಖ್‌ನಲ್ಲಿ ಸೈನಿಕರ ಚಕಮಕಿ ನಂತರ ಕಳೆದ ವರ್ಷದಿಂದ ಭಾರತ ಮತ್ತು ಚೀನಾ ನಡುವೆ ಉದ್ವಿಗ್ನ ಪರಿಸ್ಥಿತಿ ಇದೆ. ಭಾರತ ಹಾಗೂ ಚೀನಾ ಮಧ್ಯೆ ಹಲವು ಸುತ್ತಿನ ಸಭೆಗಳ ನಂತರವೂ ಸಮಸ್ಯೆ ಹಾಗೆಯೇ ಉಳಿದಿದೆ.
ಯುದ್ಧ ತರಬೇತಿಗೆ ಚೀನಾ ಉತ್ತೇಜನ
ಈ ಪ್ರಸಕ್ತ ವರ್ಷದಲ್ಲಿ ಚೀನಾ ಸರ್ಕಾರ ಮಿಲಿಟರಿ ಶಿಕ್ಷಣ ಮತ್ತು ಯುದ್ಧ ತರಬೇತಿಯನ್ನು ಉತ್ತೇಜಿಸಲಿದೆ ಎಂದು ಮತ್ತೊಂದು ಸರ್ಕಾರಿ ವರದಿ ಹೇಳಿದೆ. ವಾಷಿಂಗ್ಟನ್ ಪೋಸ್ಟ್ ಪ್ರಕಾರ, ಯುಎಸ್ ನಂತರ ಚೀನಾ ವಿಶ್ವದ ಎರಡನೇ ಅತಿದೊಡ್ಡ ಮಿಲಿಟರಿ ಬಜೆಟ್ ಅನ್ನು ಹೊಂದಿದೆ. ದೀರ್ಘ-ಶ್ರೇಣಿಯ ಪರಮಾಣು ಸಾಮರ್ಥ್ಯದ ಕ್ಷಿಪಣಿಗಳು ಮತ್ತು ಇತರ ಶಸ್ತ್ರಾಸ್ತ್ರಗಳನ್ನು ಖರೀದಿ ಮಾಡಲು ಚೀನಾ ಹೂಡಿಕೆ ಮಾಡಲಿದೆ.