ಹುಕ್ಕೇರಿ ಮಹಾಲಕ್ಷ್ಮೀ (ದ್ಯಾಮವ್ವಾ) ಜಾತ್ರೆ ರದ್ದು : ಎರಡು ವರ್ಷ ಮುಂದೂಡಿಕೆ
ಹುಕ್ಕೇರಿ 01: ಪ್ರತಿ ಮೂರು ವರ್ಷಕೊಮ್ಮೆ ಜರುಗುವ ಹುಕ್ಕೇರಿ ಗ್ರಾಮದೇವತೆ ಲಕ್ಷ್ಮೀ (ದ್ಯಾಮವ್ವಾ) ಜಾತ್ರಯನ್ನು ಈ ವರ್ಷ ಎಪ್ರೀಲ 6 ರಿಂದ 10 ರ ವರೆಗೆ ಐದು ದಿನಗಳ ವರೆಗೆ ಅದ್ಧೂರಿಯಾಗಿ ಆಚರಿಸುವದಾಗಿ ನಿಶ್ಚಯಿಸಲಾಗಿತ್ತು. ಜನ ಜಾತ್ರೆಯ ಎಲ್ಲ ಪೂರ್ವ ಸಿದ್ಧತೆಯನ್ನು ಮಾಡಿಕೊಂಡಿದ್ದರು. ನಗರದಲ್ಲಿ ಕೋಣದ ಮೆರವಣಿಗೆ ಮಾಡಿ ಜಾತ್ರೆಗೆ ಚಾಲನೆ ನೀಡಲಾಗಿತ್ತು. ಕಂದಾಯ ಇಲಾಖೆ, ಪೋಲಿಸ ಇಲಾಖೆ, ಆರೋಗ್ಯ ಇಲಾಖೆ, ಹಾಗೂ ಪುರಸಭೆ ಅಧಿಕಾರಿಗಳು ಸಬೆ ಆಯೋಜಿಸಿ ಯಾತ್ರಾ ಕಮೀಟಿ ಹಾಗೂ ಸಾರ್ವಜನಿಕರಿಂದ ಅಭಿಪ್ರಾಯ ಪಡೆದುಕೊಂಡಿದ್ದರು. ರಾಜ್ಯದಲ್ಲಿ ಕೋರೊನಾದ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿರುವದರಿಂದ ಸರಕಾರ ಜಾತ್ರೆ, ಪ್ರತಿಭಟನೆ, ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವದನ್ನು ನಿಷೇದಿಸಿ ಆದೇಶ ಹೊರಡಿಸಿದ್ದರಿಂದ ಹುಕ್ಕೇರಿಯ ಜಾತ್ರೆಯಲ್ಲಿ ಕೂಡ ಲಕ್ಷಾಂತರ ಜನ ಸೇರುವ ಸಾಧ್ಯತೆ ಇರುವದರಿಂದ ಜಾತ್ರೆಗೆ ಅನುಮತಿ ನೀಡದಿರುವ ಬಗ್ಗೆ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದರು. ಎಲ್ಲೆಡೆ ಜಾತ್ರೆಗಳಿಗೆ ಅನುಮತಿ ನೀಡಲಾಗಿದ್ದು ಯಥಾ ಪ್ರಕಾರ ಜಾತ್ರೆಗಳು ನಡೆಯುತ್ತಿವೆ ಹಾಗೂ ಉಪ ಚುನಾವಣೆ ಪ್ರಚಾರ ಸಭೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಕೂಡುತ್ತಿದ್ದು ಅಲ್ಲಿ ಕೋವಿಡ ನಿಯಮಾವಳಿ ಹಾಗೂ ಸರಕಾರದ ಆದೇಶ ಗಾಳಿಗೆ ತೂರಲಾಗುತ್ತಿದೆ. ಆದರೆ ಈ ಜಾತ್ರೆಗೆ ಯಾಕೆ ಅನುಮತಿ ನೀಡುತ್ತಿಲ್ಲವೆಂದು ಸಾರ್ವಜನಿಕರ ಯಕ್ಷಪ್ರಶ್ನೆ? ಜಾತ್ರೆಯನ್ನು ಯಾವದೇ ಪರಿಸ್ಥಿಯಲ್ಲಿ ಶಾಂತಿಯುತವಾಗಿ ಮಾಡೇ ತೀರಬೇಕೆಂಬ ಹಟ ಮಾತ್ರ ಜನರಲ್ಲಿದ್ದು ಇದು ವಿವಾದಕ್ಕೆ ಎಡೆ ಮಾಡಿ ಕೊಟ್ಟಂತಾಗಿದೆ
ಜಿಲ್ಲಾಧಿಕಾರಿಗಳು ನಗರಕ್ಕೆ ಭೆಟ್ಟಿ ನೀಡಿ ಪರಿಶೀಲನೆ ಮಾಡಿ ನಗರದಲ್ಲಿ ಎಲ್ಲೆಡೆ ಅಳವಡಿಸಲಾದ ಸ್ವಾಗತ ಬ್ಯಾನರ್ಸ್ಗಳನ್ನು ತೆರವುಗೊಳಿಸಲು ಸೂಚಿಸಿದ್ದರಿಂದ ಪುರಸಭೆ ಮುಖ್ಯಾಧಿಕಾರಿ ಮೋಹನ ಜಾಧವ ಅವರು ಪೌರ ಕಾರ್ಮಿಕರ ಸಹಾಯದಿಂದ ಎಲ್ಲ ಬ್ಯಾನರ್ಸ್ಗಳನ್ನು ತೆರವುಗೊಳಿಸಿದರು. ಜಾತ್ರಾ ಕಮೀಟಿಗೆ ತಹಶೀಲದಾರ ಜಾತ್ರೆ ರದ್ದು ಪಡಿಸಿದ ಬಗ್ಗೆ ಪತ್ರ ನೀಡಿದ ನಂತರ ಜಾತ್ರಾ ಕಮೀಟಿ ಪದಾಧಿಕಾರಗಳು, ಹಕ್ಕುದಾರರು, ಸಾರ್ವಜನಿಕರು ನಗರದ ಹೊರ ವಲಯದ ಲಕ್ಷ್ಮೀ ಮಂದಿರದಲ್ಲಿ ಕೂಡಿ ಚರ್ಚೆ ನಡೆಸಿದರು. ಇಂದಿನ ಸಂದಿಗ್ಧ ಪರಿಸ್ಥಿತಿಯಲ್ಲಿ ಸರಕಾರದ ಆದೇಶದ ಉಲ್ಲಂಘನೆ ಮಾಡಿ ಅನುಚಿತ ಪರಿಸ್ಥಿತಿಗೆ ಎದುರಾಗುವದು ಬೇಡ ಕಾರಣ ಜಾತ್ರೆಯನ್ನು ರದ್ದು ಪಡಿಸಿ ಎರಡು ವರ್ಷಗಳ ನಂತರ ಅಂದರೆ 2023 ರಲ್ಲಿ ಜಾತ್ರೆ ಮಾಡುವ ಒಮ್ಮತದ ನಿರ್ಣಯ ತೆಗೆದುಕೊಳ್ಳಲಾಯಿತು. ನಂತರ ವಾಡಿಕೆಯಂತೆ ಮೂರು ವರ್ಷಗಳಿಗೊಮ್ಮೆ ಜರುಗಿಸಲಾಗುವದು. ದೇವಿಯ ಮೂರ್ತಿಯನ್ನು ಬಿಚ್ಚಿ ಬಣ್ಣಕ್ಕೆ ಕೊಡಲಾಗಿದೆ. ಯುಗಾದಿ ಹಬ್ಬದಂದು ದೇವಿಯನ್ನು ಮಂದಿರದಲ್ಲಿ ಪ್ರತಿಷ್ಠಾಪನೆ ಮಾಡಿ ಸೀರೆ ಉಡಿಸಿ, ಅಲಂಕಾರದೊಂದಿಗೆ ವಿಧಿಪೂರ್ವಕ ಪೂಜೆ ಸಲ್ಲಿಸಲಾಗುವದು. 13 ಜನ ಹಕ್ಕುದಾರರು ಗುಡಿಗೆ ಬಂದು ಪೂಜೆ ಸಲ್ಲಿಸಿ ನೈವೇದ್ಯ ಅರ್ಪಿಸಿದ ನಂತರ ಸಾರ್ವಜನಿಕರು ಸರಳವಾಗಿ ಪೂಜೆ ಸಲ್ಲಿಸಿ ನೈವೇದ್ಯ ಅರ್ಪಿಸಲಾಗುವದೆಂದು ಜಾತ್ರಾ ಕಮೀಟಿ ಪದಾಧಿಕಾರಿಗಳು ಪತ್ರಿಕೆಗೆ ತಿಳಿಸಿದರು.
ಬುಧುವಾರ ಸಂಜೆ ಹಳೆ ಬಸ್ ನಿಲ್ದಾಣದ ಬಳಿಯ ಸಾಯಿ ಮಂದಿರ ಆವರಣದಲ್ಲಿ ನೂರಾರು ಸಂಖ್ಯೆಯಲ್ಲಿ ಯುವಕರು ಸಭೆ ಸೇರಿ ಏನೇ ಆಗಲಿ ನಮ್ಮ ಪದ್ಧತಿಯನ್ನು ಮುರಿಯದೆ ಜಾತ್ರೆ ಮಾಡಿಯೇ ತಿರೋಣ ಎಂದು ನಿರ್ಣಯಿಸಿ ಇಂದು ಮುಂಜಾನೆ ಅಡವಿಸಿದ್ಧೇಶ್ವರ ಮಠದ ಬಳಿ 300-400 ಜನ ಗುಂಪು ಸೇರಿ ಮೆರವಣಿಗೆ ಮೂಲಕ ಜಾತ್ರೆಗೆ ಅನುಮತಿ ನೀಡಲು ತಹಶೀಲದಾರಿಗೆ ಮನವಿ ನೀಡಲು ಹೊರಟಾಗ ನಗರದ ಮಧ್ಯ ಭಾಗದಲ್ಲಿರುವ ಯಲ್ಲಮ್ಮ ದೇವಸ್ಥಾನ ಬಳಿ ಹುಕ್ಕೇರಿ ಪೋಲಿಸ ಠಾಣೆ ಉಪ ನಿರೀಕ್ಷಕ ಸಿದ್ರಾಮಪ್ಪ ಉಣ್ಣದ ಅವರು ತಮ್ಮ ಸಿಬ್ಬಂದಿಯ ಜೊತೆಗೂಡಿ ಬೆತ್ತ ತೋರಿಸಿ ಗುಂಪನ್ನು ಚದುರಿಸಿ ವಾತಾವರಣವನ್ನು ತಿಳಿಗೊಳಿಸಿದರು. ಅದಾಗ್ಯೂ ಸದ್ಯಕ್ಕೆ ನಗರದ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಯಾವದೇ ಅಹಿತಕರ ಘಟನೆ ನಡೆಯದಂತೆ ವೃತ್ತ ನಿರೀಕ್ಷಕ ರಮೇಶ ಛಾಯಾಗೋಳ ಅವರ ಮಾರ್ಗದರ್ಶನದಲ್ಲಿ ಉಪ ನಿರೀಕ್ಷಕ ಸಿದ್ರಾಮಪ್ಪ ಉಣ್ಣದ ನಗರದ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ.
ಈ ಸಂದರ್ಭದಲ್ಲಿ ಪಿಂಟು ಶೆಟ್ಟಿ, ಮಹಾವೀರ ನಿಲಜಗಿ, ಗುರು ಕುಲಕರ್ಣಿ, ಸುನೀಲ ನಾಯಿಕ, ಬಾಬು ನಾಯಿಕ, ಭೀಮಾನಂದ ಮುದಕನ್ನವರ, ಚಿದಾನಂದ ಬಸ್ತವಾಡೆ, ಜಯಗೌಡ ಪಾಟೀಲ, ಅಣ್ಣಪ್ಪ ಪಾಟೀಲ, ಬಸವರಾಜ ನಂದಿಕೋಲಮಠ, ಅಣ್ಣಾಗೌಡ ಪಾಟೀಲ, ಈರಗೌಡ ಫಾಟೀಲ ಹಾಗೂ ಇನ್ನಿತರರು ಉಪಸ್ಥಿತರಿದ್ದರು.