ಕಟ್ಟಡ ಕಾರ್ಮಿಕರು ಸರಕಾರ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಿ : ಸಿದ್ದು ಸವದಿ
ರಬಕವಿ-ಬನಹಟ್ಟಿ 02 : ಕೋರೊನಾ ಸಮಯದಲ್ಲಿ ಯಾವುದೆ ಕಾಮಗಾರಿಗಳು ಸರಿಯಾಗಿ ನಡೆಯದೆ ಕಟ್ಟಡ ಕಾರ್ಮಿಕರು ಜೀವನ ನಡೆಸಲು ಕಷ್ಟಕರವಾಗಿದೆ. ಸಂಕಷ್ಟದಲ್ಲಿರುವ ಕಟ್ಟಡ ಕಾರ್ಮಿಕರಿಗೆ ನೆರವಾಗಲು ಈಗಾಗಲೇ ಸರಕಾರ ಅನೇಕ ಸವಲತ್ತುಗಳನ್ನು ನೀಡಿದೆ. ಸರಕಾರ ನೀಡಿರುವ ಸವಲತ್ತುಗಳನ್ನು ಕಟ್ಟಡ ಕಾರ್ಮಿಕರು ಸದುಪಯೋಗ ಪಡೆಸಿಕೊಳ್ಳಬೇಕು ಎಂದು ತೇರದಾಳ ಕ್ಷೇತ್ರದ ಶಾಸಕ ಹಾಗೂ ಕೆ.ಎಚ್.ಡಿ.ಸಿ. ನಿಗಮದ ಅಧ್ಯಕ್ಷ ಸಿದ್ದು ಸವದಿ ಹೇಳಿದರು.
ಶಾಸಕ ಸಿದ್ದು ಸವದಿಯವರು ರಬಕವಿ-ಬನಹಟ್ಟಿ ತಾಲೂಕಾ ಆಡಳಿತ, ಕಾರ್ಮಿಕ ಇಲಾಖೆ, ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಕೋವಿಡ್-19 ಕಾರಣದಿಂದ ಸಂಕಷ್ಟದಲ್ಲಿರುವ ರಬಕವಿ ಬನಹಟ್ಟಿ ತಾಲೂಕಿನ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಆಹಾರ ಧಾನ್ಯಗಳ ಕಿಟ್ ವಿತರಿಸಿ ಮಾತನಾಡುತ್ತಾ, ಕಟ್ಟಡ ಕಾರ್ಮಿಕರಿಗೆ ಸರಕಾರದಿಂದ ಧನಸಹಾಯವಲ್ಲದೆ ಅವರ ಮಕ್ಕಳ ವಿದ್ಯಾಭ್ಯಾಸಕ್ಕೆ ವಿದ್ಯಾರ್ಥಿ ವೇತನ, ಮಕ್ಕಳ ಮದುವೆ ಸಹಾಯಧನ ಸೇರಿದಂತೆ ಅನೇಕ ಸೌಲಭ್ಯಗಳನ್ನು ನೀಡಿದೆ. ಅವುಗಳು ಸರಕಾರದಿಂದ ಅಧಿಕೃತವಾಗಿ ನೋಂದಾಯಿಸಲ್ಟಟ್ಟ ಕಾರ್ಮಿಕರಿಗೆ ದೊರೆಯುತ್ತಿವೆ. ನೋಂದಾವಣೆಯಾಗದೆ ಬಾಕಿ ಉಳಿದ ಕಾರ್ಮಿಕರು ಶೀಘ್ರವಾಗಿ ನೋಂದಾಯಿಸಿಕೊಂಡು ಸರಕಾರದಿಂದ ಸವಲತ್ತುಗಳನ್ನು ಪಡೆಯಬೇಕೆಂದರು.
ನಗರಸಭಾ ಅಧ್ಯಕ್ಷ ಶ್ರೀಶೈಲ ಬೀಳಗಿ, ರಬಕವಿ-ಬನಹಟ್ಟಿ ತಾಲೂಕಾ ತಹಶೀಲ್ದಾರ ಸಂಜಯ ಇಂಗಳೆ, ನಗರಸಭೆ ಪೌರಾಯುಕ್ತ ಶ್ರೀನಿವಾಸ ಜಾಧವ, ತಾ.ಪಂ. ಅಧಿಕಾರಿ ಸಂಜೀವ ಹಿಪ್ಪರಗಿ, ಕಾರ್ಮಿಕ ಇಲಾಖೆಯ ಸಿಬ್ಬಂದಿ, ಸಂಜಯ ತೆಗ್ಗಿ, ಯಲ್ಲಪ್ಪ ಕಟಗಿ, ಮಾಣಿಕಚಂದ ಕಾಸಾರ ಸೇರಿದಂತೆ ಕಟ್ಟಡ ಕಾರ್ಮಿಕರು ಉಪಸ್ಥಿತರಿದ್ದರು.