ಅಂತರರಾಷ್ಟ್ರೀಯ

ಇಂದು ರಾಜೀನಾಮೆ ನೀಡಲಿರುವ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್

ಇಂದು ರಾಜೀನಾಮೆ ನೀಡಲಿರುವ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್

ಲಂಡನ್: ಜುಲೈ 07: ಬೋರಿಸ್ ಜಾನ್ಸನ್ ನಾಯಕತ್ವದ ಬ್ರಿಟನ್ ಸರ್ಕಾರ ಅಲುಗಾಡುತ್ತಿದೆ. ಸಾಲು ಸಾಲು ಸಚಿವರ ರಾಜೀನಾಮೆಯಿಂದ ದಿಗಿಲಿಗೆ ಬಿದ್ದಿರುವ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಇಂದು ರಾಜೀನಾಮೆ ನೀಡುವ ಸಾಧ್ಯತೆಯಿದೆ. ಎರಡು ದಿನಗಳಿಂದ ಸಚಿವರ ರಾಜೀನಾಮೆ ಅಲೆಯು ಮುಂದುವರೆದಿದ್ದು ಈ ಬಗ್ಗೆ ಚಿಂತಿತರಾಗಿರುವ ಬೋರಿಸ್ ಜಾನ್ಸನ್ ಗುರುವಾರ ರಾಜೀನಾಮೆ ನೀಡಲಿದ್ದಾರೆಂದು  ಅವರ ಆಪ್ತ ಅಧಿಕಾರಿಗಳು ಹೇಳಿದ್ದಾರೆಂದು ವರದಿಯಾಗಿದೆ.

ಪ್ರಧಾನಿ ಹುದ್ದೆಯಿಂದ ಕೆಳಗಿಳಿಯಬೇಕೆಂದು ಬೋರಿಸ್ ಜಾನ್ಸನ್ ಮೇಲೆ ಸಚಿವರು ಒತ್ತಡ ಹಾಕಿದ್ರೂ ಪಟ್ಟು ಬಿಡದ ಅವರು ಹೋರಾಟಕ್ಕೆ ಇಳಿಯುವುದಾಗಿ ಹೇಳಿದ್ದರು. ಆದರೆ ಕಳೆದ 48 ಗಂಟೆಗಳಲ್ಲಿ ಹೋರಾಟಕ್ಕೆ ಇಳಿಯುವುದಾಗಿ ಜಾನ್ಸನ್ ಹೇಳಿದ್ದರೂ ಇದೀಗ ಅವರು ರಾಜೀನಾಮೆ ನೀಡಬೇಕು ಎಂದು ಒಪ್ಪಿಕೊಂಡಿದ್ದಾರೆ ಎಂದು ಅವರ ನಿಕಟ ಮಿತ್ರರೊಬ್ಬರು ಹೇಳಿದರು. ರಾಜೀನಾಮೆ ಬಳಿಕ ಅವರು ಅಕ್ಟೋಬರ್ ವರೆಗೆ ಹಂಗಾಮಿ ಪ್ರಧಾನ ಮಂತ್ರಿಯಾಗಿ ಉಳಿಯುತ್ತಾರೆ.  ಪಕ್ಷದ ವಾರ್ಷಿಕ ಸಮ್ಮೇಳನದ ಸಮಯದಲ್ಲಿ ಹೊಸ ಪ್ರಧಾನಿಯನ್ನ ನೇಮಿಸಲಾಗುತ್ತದೆ.

ರಾಜೀನಾಮೆ ನೀಡಲು ಸಿದ್ಧರಾಗಿರುವ ಬೋರಿಸ್ ಜಾನ್ಸನ್ ಅವರು ಗುರುವಾರ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆನ್ನಲಾಗಿದೆ.

ಮೊನ್ನೆಯಷ್ಟೇ ಇನ್ಫೋಸಿಸ್ ನ ನಾರಾಯಣ ಮೂರ್ತಿಯವರ ಅಳಿಯ ಬ್ರಿಟನ್ ಸರ್ಕಾರದ ಹಣಕಾಸು ಖಾತೆ ಸಚಿವ ರಿಷಿ ಸುನಾಕ್ ರಾಜೀನಾಮೆ ನೀಡಿದ್ದರು. ಅವರ ಸ್ಥಾನಕ್ಕೆ ನೇಮಕವಾಗಿದ್ದ ನೂತನ ಸಚಿವ ನಾಧಿಮ್ ಜಹಾವಿ ಸಹ ಇದೀಗ ಜಾನ್ಸನ್ ಪದತ್ಯಾಗಕ್ಕೆ ಒತ್ತಾಯಿಸಿದ್ದಾರೆ.

ಹಲವು ಹಗರಣಗಳು ಹಾಗೂ ಕೋವಿಡ್‌ ನಿಯಮಗಳನ್ನು ಉಲ್ಲಂಘಿಸಿ ಔತಣಕೂಟ ನಡೆಸಿದ್ದ  ಬೋರಿಸ್‌ ಜಾನ್ಸನ್ ವಿರುದ್ಧ ಆಕ್ರೋಶಕ್ಕೆ ಕಾರಣವಾಗಿದೆ. ಸಂಸದರಾಗಿದ್ದ ಕ್ರಿಸ್‌ ಪಿಂಚರ್‌ ಅವರ ವಿರುದ್ಧ ಲೈಂಗಿಕ ದುರ್ನಡೆತೆ ಆರೋಪಗಳಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳದೇ ಉನ್ನತ ಸ್ಥಾನ ನೀಡಿದ್ದಕ್ಕೆ  ಬೋರಿಸ್‌ ರಾಜೀನಾಮೆಗೆ ಒತ್ತಡ ಹೆಚ್ಚಾಗಿದೆ.

ಸುದ್ದಿ ಓದಿ