ಅಂತರರಾಷ್ಟ್ರೀಯ

ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ರಾಜೀನಾಮೆ

ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ರಾಜೀನಾಮೆ

ಲಂಡನ್: ಜುಲೈ 7 : ಭಾರೀ ವಿರೋಧ ಮತ್ತು ಸಚಿವರ ಸರಣಿ ರಾಜೀನಾಮೆ ಬಳಿಕ ಮಣಿದ ಬ್ರಿಟನ್‌ ಪ್ರಧಾನಿ ಬೋರಿಸ್ ಜಾನ್ಸನ್ ರಾಜೀನಾಮೆ ನೀಡಿದ್ದಾರೆ.  ಬ್ರೆಕ್ಸಿಟ್, ಕೋವಿಡ್ ಮತ್ತು ಹೆಚ್ಚುತ್ತಿರುವ ಹಗರಣಗಳಿಂದ ಮೂರು ಪ್ರಕ್ಷುಬ್ಧ ವರ್ಷಗಳ ನಂತರ ಯುಕೆ ಪ್ರಧಾನಿ ಬೋರಿಸ್ ಜಾನ್ಸನ್ ಕನ್ಸರ್ವೇಟಿವ್ ಪಕ್ಷದ ನಾಯಕನ ಸ್ಥಾನಕ್ಕೆ ಗುರುವಾರ ರಾಜೀನಾಮೆ ನೀಡಿದ್ದಾರೆ.  ಹತ್ತಾರು ಸಚಿವರು ತಮ್ಮ ಹಗರಣ ಪೀಡಿತ ಸರಕಾರವನ್ನು ತ್ಯಜಿಸಿದ ನಂತರ ಹೊಸ ಪ್ರಧಾನಿಯ ಆಯ್ಕೆಗೆ ದಾರಿ ಮಾಡಿಕೊಟ್ಟಿದ್ದಾರೆ.

ರಾಜೀನಾಮೆ ಘೋಷಿಸಿ ಮಾತನಾಡಿದ ಬೋರಿಸ್ ಜಾನ್ಸನ್ ಸಂಸದೀಯ ಕನ್ಸರ್ವೇಟಿವ್ ಪಕ್ಷದ ಇಚ್ಛೆಯು ಆ ಪಕ್ಷದ ಹೊಸ ನಾಯಕನ ಆಯ್ಕೆಯಾಗಬೇಕು  ಮತ್ತು ಅದರಿಂದ ಹೊಸ ಪ್ರಧಾನ ಮಂತ್ರಿಯಾಗಬೇಕು ಎಂದರು. ವಿಶ್ವದ ಅತ್ಯುತ್ತಮ ಸ್ಥಾನವನ್ನು ತ್ಯಜಿಸುತ್ತಿರುವುದು ದುಃಖವಾಗಿದೆ ಎಂದ ಬೋರಿಸ್ ಡಿಸೆಂಬರ್ 2019 ರಲ್ಲಿ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದ ಜನಾದೇಶವನ್ನು ನೀಡಲು ಅಂತಿಮ ಅವಧಿಯಲ್ಲಿ ಹೋರಾಡಿದ್ದನ್ನು ಸಮರ್ಥಿಸಿಕೊಂಡರು.

50 ಕ್ಕೂ ಹೆಚ್ಚು ಸಂಸದರ ರಾಜೀನಾಮೆಗಳ ಅಲೆಯ ಹೊರತಾಗಿಯೂ ಬೋರಿಸ್ ಜಾನ್ಸನ್ ಅಧಿಕಾರಕ್ಕೆ ಅಂಟಿಕೊಂಡಿದ್ದರು. ಬುಧವಾರದವರೆಗೆ ರಾಜೀನಾಮೆ ನೀಡುವುದಿಲ್ಲ, ಹೋರಾಡುತ್ತೇನೆ ಎಂದಿದ್ದರು.  ಆದರೆ ಗುರುವಾರದ ಶಿಕ್ಷಣ ಸಚಿವ ಮಿಚೆಲ್ ಡೊನೆಲನ್ ಅವರ ನಿರ್ಗಮನ ಮತ್ತು ವಿತ್ತ ಸಚಿವ ನಾಧಿಮ್ ಜಹಾವಿ ನೇಮಕಗೊಂಡ ಕೇವಲ ಎರಡು ದಿನಗಳ ಅವಧಿಯಲ್ಲಿ ಪಿಎಂಗೆ ರಾಜೀನಾಮೆ ನೀಡುವಂತೆ ಬಹಿರಂಗವಾಗಿ ಮನವಿ ಮಾಡಿದ್ದು ಬೋರಿಸ್ ಅವರನ್ನು ಕೆಳಗಿಳಿಯುವಂತೆ ಕಂಗೆಡಿಸಿತ್ತು.

ರಾಜಕೀಯದಲ್ಲಿ ಯಾರೂ ಅನಿವಾರ್ಯವಲ್ಲ. ಪ್ರಧಾನಿಯಾಗಿ ನಾನು ಯಶಸ್ವಿಯಾಗಲಿಲ್ಲ ಎಂದು ವಿಷಾದ ವ್ಯಕ್ತಪಡಿಸಿದ ಅವರು  ನಾನು ದುಃಖಿತನಾಗಿದ್ದೇನೆ. ವಿಶ್ವದ ಅತ್ಯುತ್ತಮ ಕೆಲಸವನ್ನು ತ್ಯಜಿಸುತ್ತಿದ್ದೇನೆ. ಆದರೆ ಹೊಸ ನಾಯಕನನ್ನು ಬೆಂಬಲಿಸುತ್ತೇನೆ ಎಂದರು.  ಉಕ್ರೇನ್‌ಗೆ ಬೆಂಬಲ ನೀಡುವುದನ್ನು ಮುಂದುವರಿಸುತ್ತೇವೆ ಎಂದ ಬೋರಿಸ್ ಮುಂದಿನ ಪ್ರಧಾನಿ ಆಯ್ಕೆಯಾಗುವವರೆಗೂ ಮುಂದುವರಿಯುವುದಾಗಿ ಹೇಳಿದರು.

ಸುದ್ದಿ ಓದಿ