ಅಂತರರಾಷ್ಟ್ರೀಯ

ಬ್ರಿಟನ್‌; ಪ್ರಧಾನಿ ಬೋರಿಸ್ ಜಾನ್ಸನ್ ನಂತರ, ಸಂಪುಟ ಸಚಿವರಿಗೂ ಕೊರೊನಾ ಸೋಂಕು ಭಯ

ಬ್ರಿಟನ್‌;  ಪ್ರಧಾನಿ ಬೋರಿಸ್  ಜಾನ್ಸನ್ ನಂತರ,    ಸಂಪುಟ ಸಚಿವರಿಗೂ ಕೊರೊನಾ ಸೋಂಕು ಭಯ

ಲಂಡನ್, ಮಾ ೨೮,ಜಗತ್ತನ್ನು ತಲ್ಲಣಗೊಳಿಸಿರುವ   ಕೊರೊನಾ ವೈರಸ್ ಉಗ್ರ ಪ್ರತಾಪಕ್ಕೆ  ಬ್ರಿಟನ್   ಆಡಳಿತಗಾರರು ಭಯ ಭೀತಿಗೊಳಗಾಗಿದ್ದಾರೆ.  ಕೋವಿಡ್ -೧೯ ಮಹಾಮಾರಿ   ಯಾವಾಗ  ಯಾರಿಗೆ  ವಕ್ಕರಿಸಲಿದೆಯೋ ..?  ಎಂಬ  ಆತಂಕಕ್ಕೆ ಒಳಗಾಗಿದ್ದಾರೆ. ರಾಜಕುಮಾರ  ಚಾರ್ಲ್ಸ್ , ಪ್ರಧಾನಿ ಬೋರಿಸ್ ಜಾನ್ಸನ್, ಆರೋಗ್ಯ ಸಚಿವ ಮ್ಯಾಟ್ ಹಾನ್ಕಾಕ್  ಸೋಂಕಿಗೆ ಒಳಗಾಗಿ   ಐಸೋಲೇಷನ್  ವಾರ್ಡ್  ಸೇರಿದ್ದಾರೆ.    ಬೋರಿಸ್ ಜಾನ್ಸನ್  ಕೊರೊನಾ ಸೋಂಕಿಗೆ ಒಳಗಾದ  ಮೊದಲ ವಿಶ್ವ ನಾಯಕ ಎಂಬ ದಾಖಲೆ ಸೇರಿದ್ದಾರೆ.   ಬೋರಿಸ್ ಜಾನ್ಸನ್  ಸಂಪುಟದ ಹಲವು   ಸಚಿವರಿಗೂ  ಸೋಂಕು ಹಬ್ಬುವ  ಸಾಧ್ಯತೆ ಇದೆ ಎಂದು ಸ್ಥಳೀಯ ಮಾಧ್ಯಮಗಳು  ವರದಿಮಾಡಿವೆ.   ಏಕೆಂದರೆ ಕಳೆದ ಕೆಲ ದಿನಗಳಿಂದ ಬೋರಿಸ್  ಜಾನ್ಸನ್   ತಮ್ಮ  ಸಚಿವ ಸಂಪುಟದ ಸಹೋದ್ಯೋಗಿಗಳೊಂದಿಗೆ  ಹಲವು  ಅಧಿಕೃತ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದರು ಈ ಹಿನ್ನೆಲೆಯಲ್ಲಿ  ಅವರಿಗೂ ಕೊರೊನಾ  ಸೋಂಕು  ತಗಲಿರುವ ಸಾಧ್ಯತೆಯಿದೆ ಎಂಬಅಭಿಪ್ರಾಯ ವ್ಯಕ್ತವಾಗಿದೆ.
ಇನ್ಫೋಸಿಸ್ ಸಹ-ಸಂಸ್ಥಾಪಕ  ಎನ್. ಆರ್.  ನಾರಾಯಣ ಮೂರ್ತಿ  ಅಳಿಯ, ಭಾರತೀಯ ಮೂಲದ ರಾಜಕೀಯ ನಾಯಕ  ರಿಷಿ ಸುನಕ್  ಬೋರಿಸ್ ಜಾನ್ಸನ್ ಸಂಪುಟದಲ್ಲಿ ಹಣಕಾಸು ಸಚಿವರಾಗಿದ್ದಾರೆ.  ಆದರೆ.   ಅವರಲ್ಲಿ  ಕೊರೊನಾ  ರೋಗ ಲಕ್ಷಣಗಳು  ಕಂಡುಬಂದಿಲ್ಲ  ಎಂದು ಬಿಬಿಸಿ ವರದಿ ಮಾಡಿದೆ.   ತಾನು  ಸ್ವಯಂ  ನಿರ್ಬಂಧಕ್ಕೆ  ತೆರಳಬೇಕಾದ ಅಗತ್ಯವಿಲ್ಲ  ಎರಡು ಮೀಟರ್  ಗಳ  ಸಾಮಾಜಿಕ  ಅಂತರ ಪಾಲಿಸುತ್ತಿದ್ದೇನೆ ಎಂದು    ರಿಷಿ ಸುನಕ್  ಹೇಳಿದ್ದಾರೆ. ಅವರು ಗುರುವಾರ ರಾತ್ರಿ ಪ್ರಧಾನಿ ಜಾನ್ಸನ್ ಅವರನ್ನು ಭೇಟಿ ಮಾಡಿದ್ದರು. ಆಗ  ಅವರು ಪ್ರಧಾನಿ ಮಂತ್ರಿಯಿಂದ ಎರಡು ಮೀಟರ್ ದೂರದಲ್ಲಿ ನಿಂತಿದ್ದರು.  ಕೊರೊನಾ ಸೋಂಕು  ವ್ಯಾಪಕವಾಗಿ  ಹಬ್ಬುತ್ತಿರುವ   ಹಿನ್ನೆಲೆಯಲ್ಲಿ ರಿಷಿ ಸುನಕ್ ಬ್ರಿಟಿಷ್ ಸರ್ಕಾರದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು, ಲಾಕ್ ಡೌನ್ ನಿಂದ  ತೀವ್ರವಾಗಿ ಹಾನಿಗೊಳಗಾಗುತ್ತಿರುವ  ದೇಶದ  ಆರ್ಥಿಕತೆ ಸುಧಾರಿಸಲು ಶ್ರಮಿಸುತ್ತಿದ್ದಾರೆ.
ಕೊರೊನಾ ವೈರಸ್  ಹಿನ್ನೆಲೆಯಲ್ಲಿ ಕಳೆದ ಕೆಲ  ವಾರಗಳಿಂದ ಪ್ರಧಾನಿ ಬೋರಿಸ್ ಜಾನ್ಸನ್,   ರಾಣಿ ಎಲಿಜಬೆತ್ ಅವರನ್ನು ಭೇಟಿ ಮಾಡಿಲ್ಲ ಎಂದು ಬಕ್ಕಿಂಗ್ ಹ್ಯಾಮ್   ಅರಮನೆಯ ವಕ್ತಾರರು ಖಚಿತಪಡಿಸಿದ್ದಾರೆ.
ಮಾರ್ಚ್ ೧೧ ರಂದು ಜಾನ್ಸನ್ ಕೊನೆಯ ಬಾರಿ  ರಾಣಿ ಅವರನ್ನು  ಭೇಟಿ ಮಾಡಿದ್ದರು ಎಂದು ತಿಳಿದುಬಂದಿದೆ. ಕೋವಿಡ್ ಭಯದಿಂದ ರಾಣಿಯೊಂದಿಗೆ ದೂರವಾಣಿಯಲ್ಲಿ ಮಾತುಕತೆ ನಡೆಸುತ್ತಿದ್ದೇನೆ ಎಂದು ಪ್ರಧಾನಿ ಹೇಳಿದ್ದರು. ಸಾಮಾನ್ಯವಾಗಿ   ಪ್ರಧಾನಿ  ಜಾನ್ಸನ್   ಪ್ರತಿ ವಾರ ರಾಣಿ ಎಲಿಜಬೆತ್‌ಗೆ  ಕಾರ್ಯಾಲಯಕ್ಕೆ   ಭೇಟಿ ನೀಡುತ್ತಾರೆ.  ಈ ನಡುವೆ  ಸ್ವಯಂ-ನಿರ್ಬಂಧದಲ್ಲಿರುವ  ಬೋರಿಸ್ ಜಾನ್ಸನ್   ತಮ್ಮ  ಅಧಿಕೃತ ನಿವಾಸದಿಂದ  ವಿಡಿಯೋ ಕಾನ್ಫರೆನ್ಸ್  ಮೂಲಕ ಆಡಳಿತದ  ಉಸ್ತುವಾರಿ ನೋಡಿಕೊಳ್ಳುತ್ತಿರುವುದಾಗಿ  ಟ್ವಿಟ್ಟರ್ ಮೂಲಕ ಶುಕ್ರವಾರ ಪ್ರಕಟಿಸಿದ್ದರು. ಪ್ರಧಾನಿ  ಜಾನ್ಸನ್   ಆರೋಗ್ಯ ಸಹಕರಿಸದಿದ್ದರೆ, ವಿದೇಶಾಂಗ ಸಚಿವ ಡೊಮಿನಿಕ್ ರೊಮ್ ತಾತ್ಕಾಲಿಕ  ಪ್ರಧಾನಿಯಾಗಲಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿಮಾಡಿವೆ.ಬ್ರಿಟನ್‌ನಲ್ಲಿ  ಈವರೆಗೆ ೧೪,೫೪೩ ಕೊರೊನಾ ಪ್ರಕರಣಗಳು ವರದಿಯಾಗಿವೆ. ಈ ಪೈಕಿ ೧೬೩  ಜನರ ಸ್ಥಿತಿ ಗಂಭೀರವಾಗಿದೆ. ಶುಕ್ರವಾರ  ಒಂದೇ ದಿನದಲ್ಲಿ  ೨,೮೮೫ ಪ್ರಕರಣಗಳು ವರದಿಯಾಗಿವೆ. ಕೋವಿಡ್‌ನಿಂದಾಗಿ ೭೫೯ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಕೊರೊನಾ  ಸೋಂಕಿಗೆ ಒಳಗಾದವರಲ್ಲಿ ೧೩೫ ಮಂದಿ ಚೇತರಿಸಿಕೊಂಡಿದ್ದಾರೆ.

ಸುದ್ದಿ ಓದಿ