ಬ್ರಿಟನ್‌ನ ಮೊದಲ ಸ್ಮಾರ್ಟ್ ಜೈಲು! ಜಿಮ್‌ನಿಂದ ಹಿಡಿದು ಟೆನ್ನಿಸ್ ವರೆಗೂ…
ಲಂಡನ್: ಮಾರ್ಚ್ 05: ಯುಕೆಯಲ್ಲಿ ಮೊದಲ ಸ್ಮಾರ್ಟ್ ಜೈಲು ನಿನ್ನೆಯಿಂದ ಪ್ರಾರಂಭವಾಗಿದೆ. ಇಲ್ಲಿ 1,700 ಕೈದಿಗಳನ್ನು ಇರಿಸಬಹುದಾಗಿದ್ದು, ಅವರಿಗೆ ಹಲವು ಆಧುನಿಕ ಸೌಲಭ್ಯಗಳನ್ನು ನೀಡುವ ವ್ಯವಸ್ಥೆ ಮಾಡಲಾಗಿದೆ. ಕೈದಿಗಳ ಮನೋಸ್ಥೈರ್ಯ ವೃದ್ಧಿಗೋಸ್ಕರ ಈ ಸ್ಮಾರ್ಟ್ ಜೈಲಿನಲ್ಲಿ ಜಿಮ್. ಗ್ಯಾಡ್ಜೆಟ್ಸ್ ನಿಂದ ಹಿಡಿದು ಟೇಬಲ್ ಟೆನ್ನಿಸ್‌ವರೆಗಿನ ಸೌಲಭ್ಯ ಒದಗಿಸಿಕೊಡಲಾಗಿದೆ. ಇಲ್ಲಿ ಕೈದಿಗಳನ್ನು ಕೈದಿಗಳೆಂದು ಕರೆಯಲ್ಲ ಬದಲಾಗಿ ರೆಸಿಡೆನ್ಸ್ (ನಿವಾಸಿಗಳು) ಎಂದು ಕರೆಯಲಾಗುತ್ತದೆ.
ಬ್ರಿಟನ್‌ನ ಕಾನೂನು ಸಚಿವ ಡೊಮಿನಿಕ್ ರಾಬ್ ಪ್ರಕಾರ, “ಇದು ದೇಶದ ಮೊದಲ ಜೈಲಾಗಿದ್ದು, ಬಿಡುಗಡೆಯಾದ ನಂತರ ಕೈದಿಗಳಿಗೆ ಶಿಕ್ಷಣ, ತರಬೇತಿ ಮತ್ತು ಉದ್ಯೋಗವನ್ನು ಒದಗಿಸುವ ಉದ್ದೇಶವನ್ನು ಹೊಂದಲಾಗಿದೆ. ಬ್ರಿಟೀಷ್ ಸರ್ಕಾರವು ಸುರಕ್ಷಿತ ಮತ್ತು ಆಧುನಿಕವಾದ ವಿಭಿನ್ನ ರೀತಿಯ ಜೈಲು ನಿರ್ಮಿಸುವ ಯೋಜನೆ ಹಾಕಿಕೊಂಡಿತ್ತು. ಅದರಂತೆ ಈ ಜೈಲು ನಿರ್ಮಿಸಲಾಗಿದೆ ಎಂದು ತಿಳಿಸಿದರು.
ಹಾಗಾದ್ರೆ ಹೊಸ ಸ್ಮಾರ್ಟ್ ಜೈಲಿನ ವಿಶೇಷತೆ ಏನು?
ಕೈದಿಗಳ ಶಿಕ್ಷೆಯ ಅವಧಿ ಪೂರ್ಣಗೊಂಡ ನಂತರ ಅವರು ತಮ್ಮ ಜೀವನವನ್ನು ಮುನ್ನಡೆಸಲು ಹಾಗೂ ಭವಿಷ್ಯದಲ್ಲಿ ಅಪರಾಧಗಳಲ್ಲಿ ಪಾಲ್ಗೊಳ್ಳಬಾರದು ಎಂಬ ಉದ್ದೇಶಕ್ಕಾಗಿ ಈ ಸ್ಮಾರ್ಟ್ ಜೈಲನ್ನು ನಿರ್ಮಾಣ ಮಾಡಲಾಗಿದೆ. ಇದಕ್ಕಾಗಿ ಕೈದಿಗಳ ಬಿಡುಗಡೆಯ ನಂತರ ಅವರಿಗೆ ಶಿಕ್ಷಣದ ಜತೆಗೆ ಉದ್ಯೋಗ ಆಧಾರಿತ ತರಬೇತಿ ನೀಡಲಾಗುವುದು. ಈ ಸ್ಮಾರ್ಟ್ ಜೈಲಿನಿನಂದ ಹೊರಬರುವ ಕೈದಿಗಳು ಮನಪರಿವರ್ತನೆಯೊಂದಿಗೆ ಉದ್ಯೋಗ ಪಡೆಯಲು ಸಾಧ್ಯವಾಗುತ್ತದೆ.
ಇಂತಹ ಜೈಲಿನಲ್ಲಿ ಶಿಕ್ಷೆಯನ್ನು ಅನುಭವಿಸಿದ ನಂತರ ಅಪರಾಧ ಕಡಿಮೆಯಾಗುವುದಲ್ಲದೆ, ಅವರು ಅಪರಾಧದ ಜಗತ್ತಿಗೆ ಮರಳುವ ಸಾಧ್ಯತೆ ಕಡಿಮೆ ಎಂದು ಬ್ರಿಟನ್‌ನ ನ್ಯಾಯಾಂಗ ಇಲಾಖೆಯ ನಂಬಿಕೆಯಾಗಿದೆ.
ಸ್ಮಾರ್ಟ್ ಜೈಲಿನಲ್ಲಿ ಸೌಲಭ್ಯಗಳು
ಮಧ್ಯ ಇಂಗ್ಲೆಂಡ್‌ನ ನಾರ್ಥಾಂಪ್ಟನ್‌ಶೈರ್‌ನ ವೆಲ್ಲಿಂಗ್‌ಬರೋದಲ್ಲಿ ನಿರ್ಮಿಸಲಾದ ಈ ಜೈಲಿನಲ್ಲಿ ಹಲವು ಹೊಸ ವ್ಯವಸ್ಥೆಗಳನ್ನು ಮಾಡಲಾಗಿದೆ. ಉದಾಹರಣೆಗೆ, ಕೈದಿಗಳು ತಮ್ಮ ದೇಹದ ಫಿಟ್ನೆಸ್ಗಾಗಿ ಜಿಮ್, ಕ್ರೀಡೆಯಲ್ಲಿ ಒಲವು ಹೊಂದಿದ್ದರೆ ಸ್ನೂಕರ್ ಟೇಬಲ್, ಟೇಬಲ್ ಟೆನ್ನಿಸ್ ಸೌಲಭ್ಯ, ಕಂಪ್ಯೂಟರ್ ಹಾಗೂ ಕೌಶಲ್ಯಾಭಿವೃದ್ಧಿಗೆ ಒತ್ತುವ ನೀಡುವ ತರಬೇತಿ ಸೆಂಟರ್ ಗಳಿವೆ. ಇದಲ್ಲದೆ, ಖೈದಿಗಳಲ್ಲಿ ಮಾದಕ ವ್ಯಸನವನ್ನು ತೊಡೆದುಹಾಕಲು ಡ್ರಗ್ ರಿಕವರಿ ಸೆಂಟರ್ ಕೂಡ ಇರುತ್ತದೆ. ಇಟ್ಟಿಗೆ ತಯಾರಿಕೆ, ಮರದ ವಸ್ತುಗಳನ್ನು ತಯಾರಿಸುವುದು, ಛಾವಣಿ ಮತ್ತು ಪ್ಲಾಸ್ಟರಿಂಗ್ ಮುಂತಾದ ಕೌಶಲ್ಯಗಳನ್ನು ಈ ಸ್ಮಾರ್ಟ್ ಜೈಲಿನಲ್ಲಿ ಕಲಿಸಿಕೊಡಲಾಗುತ್ತದೆ.