ಬ್ರೆಜಿಲ್; ಹಡಗು ಮುಳುಗಿ ಆರು ಮಂದಿ ಸಾವು ..ಒರ್ವ ನಾಪತ್ತೆ
ರಿಯೊ ಡಿ ಜನೈರೊ, ಅ 17 ಮಧ್ಯ-ಪಶ್ಚಿಮ ಬ್ರೆಜಿಲ್ ರಾಜ್ಯವಾದ ಮ್ಯಾಟೊ ಗ್ರೊಸೊದ ಪರಾಗ್ವೆ ನದಿಯಲ್ಲಿ ಹಡಗು ಮುಳುಗಿ ಕನಿಷ್ಠ ಆರು ಮಂದಿ ಸಾವನ್ನಪ್ಪಿದ್ದು, ಮತ್ತೊಬ್ಬ ವ್ಯಕ್ತಿ ನಾಪತ್ತೆಯಾಗಿದ್ದಾನೆ ಎಂದು ಸ್ಥಳೀಯ ಸರ್ಕಾರಿ ಅಧಿಕಾರಿಗಳು ಹೇಳಿದ್ದಾರೆ.
ಈ ಘಟನೆ ಶುಕ್ರವಾರ ಮಧ್ಯಾಹ್ನ ಸಂಭವಿಸಿದ್ದು, ಬಲವಾಗಿ ಬೀಸಿದ ಗಾಳಿಯಿಂದ ಹಡಗು ಮುಳುಗಡೆಗೊಂಡಿದ್ದು, ನತದೃಷ್ಟ ಹಡಗಿನಲ್ಲಿ 21 ಮಂದಿ ಪ್ರಯಾಣಿಸುತ್ತಿದ್ದು, ಇವರೆಲ್ಲ ಬಹುತೇಕ ಪ್ರವಾಸಿಗರಾಗಿದ್ದು, ಅಕ್ಟೋಬರ್ 8 ರಂದು ಗೋಯಸ್ ರಾಜ್ಯದ ರಿಯೊ ವರ್ಡೆಯಿಂದ ಹೊರಟಿದ್ದರು.
ಮೃತರೆಲ್ಲರೂ ಪುರುಷರಾಗಿದ್ದು, ಅವರಲ್ಲಿ ನಾಲ್ವರು ಒಂದೇ ಕುಟುಂಬಕ್ಕೆ ಸೇರಿದವರು. ಹಡಗು ಕೊರುಂಬ ನಗರದಿಂದ ಸುಮಾರು 10 ಕಿಲೋಮೀಟರ್ ದೂರದಲ್ಲಿದ್ದು ಮುಳುಗಿದ್ದು, ಈ ಪೈಕಿ 14 ಮಂದಿ ಸುರಕ್ಷಿತವಾಗಿ ಈಜಿ ದಡ ಸೇರಿದ್ದಾರೆ.
ರಕ್ಷಣಾ ತಂಡಗಳು ಶನಿವಾರ ಐದು ಮೃತ ದೇಹಗಳನ್ನು ಪತ್ತೆ ಹಚ್ಚಿದ್ದು, ಶುಕ್ರವಾರ ರಾತ್ರಿ ಒಂದು ಮೃತದೇಹವನ್ನು ನೀರಿನಿಂದ ಹೊರತೆಗೆಯಲಾಗಿತ್ತು. ಮತ್ತೊಬ್ಬ ಪ್ರಯಾಣಿಕ ನಾಪತ್ತೆಯಾಗಿದ್ದು, ಶೋಧ ಮುಂದುವರಿದಿದೆ. ಹಡಗು ಮುಳುಗಿದಾಗ, ಆ ಪ್ರದೇಶದಲ್ಲಿ ಗಂಟೆಗೆ 145 ಕಿಲೋಮೀಟರ್‌ಗಳಷ್ಟು ಗಾಳಿ ಬೀಸುತ್ತಿತ್ತು ಎಂದು ಬ್ರೆಜಿಲಿಯನ್ ನೌಕಾಪಡೆ ಹೇಳಿದೆ.