ಮಲ್ಯ ವಿಚಾರ ಪ್ರಸ್ತಾಪಿಸಿದ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್
ಹೊಸದಿಲ್ಲಿ: ಏಪ್ರಿಲ್ 22: ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಭಾರತಕ್ಕೆ ಭೇಟಿ ನೀಡಿದ ಎರಡನೇ ದಿನದಂದು ಬ್ರಿಟನ್‌ನಲ್ಲಿ ವಾಸಿಸುವ ವಾಂಟೆಡ್ ಜನರ ಬಗ್ಗೆ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ನೀರವ್ ಮೋದಿ, ವಿಜಯ್ ಮಲ್ಯ ಮತ್ತು ಖಲಿಸ್ತಾನಿ ಉಗ್ರರ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್, ಭಾರತಕ್ಕೆ ಬೆದರಿಕೆ ಹಾಕುವ, ಇತರ ದೇಶಗಳಿಗೆ ಬೆದರಿಕೆ ಹಾಕುವ ಉಗ್ರಗಾಮಿ ಗುಂಪುಗಳನ್ನು ನಾವು ಸಹಿಸುವುದಿಲ್ಲ ಎಂದು ಹೇಳಿದ್ದಾರೆ. ಉಗ್ರಗಾಮಿ ವಿರೋಧಿ ಕಾರ್ಯಪಡೆಯನ್ನು ಸ್ಥಾಪಿಸಿದ್ದೇವೆ ಎಂದು ಬ್ರಿಟಿಷ್ ಪ್ರಧಾನಿ ತಿಳಿಸಿದ್ದಾರೆ.
ಹಸ್ತಾಂತರ ಪ್ರಕರಣಗಳಲ್ಲಿ ಕಾನೂನು ತೊಡಕು: ಹಸ್ತಾಂತರ ಪ್ರಕರಣಗಳಲ್ಲಿ ಕಾನೂನು ಪ್ರಕ್ರಿಯೆಗಳಿದ್ದು, ಇದು ತುಂಬಾ ಕಷ್ಟಕರವಾಗಿದೆ ಎಂದು ಒಪ್ಪಿಕೊಂಡ ಅವರು, ಬ್ರಿಟನ್ ಸರ್ಕಾರ ಆತನನ್ನು ಹಸ್ತಾಂತರಿಸುವಂತೆ ಆದೇಶಿಸಿದೆ. ಭಾರತದಲ್ಲಿ ಕಾನೂನಿನಿಂದ ತಪ್ಪಿಸಿಕೊಳ್ಳಲು ನಮ್ಮ ಕಾನೂನು ವ್ಯವಸ್ಥೆಯನ್ನು ಬಳಸಲು ಬಯಸುವವರನ್ನು ಬ್ರಿಟನ್ ಸ್ವಾಗತಿಸುವುದಿಲ್ಲ ಎಂದು ತಿಳಿಸಿದ್ದಾರೆ.
ರಷ್ಯಾ ಯುದ್ಧ ಗೆಲ್ಲಲಿದೆ: ಉಕ್ರೇನ್ ಬಿಕ್ಕಟ್ಟಿನ ಬಗ್ಗೆ ತಮ್ಮ ಅನಿಸಿಕೆಗಳನ್ನು ಬಿಚ್ಚಿಟ್ಟ ಜಾನ್ಸನ್, ಉಕ್ರೇನ್ ಯುದ್ಧವು ಮುಂದಿನ ವರ್ಷದ ಅಂತ್ಯದವರೆಗೆ ಇರುತ್ತದೆ. ಈ ಯುದ್ಧವನ್ನು ರಷ್ಯಾ ಗೆಲ್ಲಬಹುದು ಎಂದು ಪಾಶ್ಚಿಮಾತ್ಯ ಗುಪ್ತಚರ ಅಧಿಕಾರಿಗಳ ಮೌಲ್ಯಮಾಪನ ಮಾಡಿವೆ. ಇದು ವಾಸ್ತವಿಕ ಸಾಧ್ಯತೆ ಎಂದು ಜಾನ್ಸನ್ ಹೇಳಿದರು. ಪುಟಿನ್ ದೊಡ್ಡ ಸೈನ್ಯ ಹೊಂದಿದ್ದು, ಫಿರಂಗಿಗಳ ಮೂಲಕ ತನ್ನ ಬಲವನ್ನು ಮುಂದುವರಿಸುಕೊಂಡು ಹೋಗುವುದು ಅವರ ಮುಂದೆ ಇರುವ ಒಂದೇ ಆಯ್ಕೆ ಎಂದ ಜಾನ್ಸನ್, ಪುಟಿನ್ ಉಕ್ರೇನ್ ಜನರ ಆತ್ಮವನ್ನು ಗೆಲ್ಲಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದ್ದಾರೆ.
ಬ್ರಿಟನ್, ಭಾರತ ಒಟ್ಟಾಗಿ ಕೆಲಸ: ಉಕ್ರೇನ್‌ನಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ನಡೆಯುತ್ತಿರುವ ಪರಿಸ್ಥಿತಿಯು ಬ್ರಿಟನ್ ಮತ್ತು ಭಾರತವನ್ನು ಹೆಚ್ಚು ಒಟ್ಟಿಗೆ ಕೆಲಸ ಮಾಡಲು ಒತ್ತಾಯಿಸುತ್ತಿದೆ ಎಂದು ಜಾನ್ಸನ್ ಹೇಳಿದರು. ರಷ್ಯಾದ ಬಗ್ಗೆ ಭಾರತದ ನಿಲುವು ಎಲ್ಲರಿಗೂ ತಿಳಿದಿದೆ. ಇದು ಬದಲಾಗುವುದಿಲ್ಲ. ಮುಂದಿನ ವಾರ ಉಕ್ರೇನ್‌ನ ಕೈವ್‌ನಲ್ಲಿ ಬ್ರಿಟನ್ ತನ್ನ ರಾಯಭಾರ ಕಚೇರಿಯನ್ನು ಪುನಃ ತೆರೆಯಲಿದೆ ಎಂದು ಅವರು ಹೇಳಿದರು.
ಭಾರತ-ಬ್ರಿಟನ್ ಮುಕ್ತ ವ್ಯಾಪಾರ: ಇನ್ನು ಮುಕ್ತ ವ್ಯಾಪಾರ ಒಪ್ಪಂದದ ಮಾತುಕತೆಯನ್ನು ದೀಪಾವಳಿಯೊಳಗೆ ಪೂರ್ಣಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಮತ್ತು ನಾನು ನಮ್ಮ ಸಂವಾದಕರನ್ನು ಕೇಳಿದ್ದೇವೆ ಎಂದು ಜಾನ್ಸನ್ ಹೇಳಿದರು.