ಅಫ್ಘನ್; ಸೇನಾ ಆಸ್ಪತ್ರೆ ಬಳಿ ಬಾಂಬ್ ಸ್ಪೋಟ, ಗುಂಡಿನ ದಾಳಿ 20 ಸಾವು
ಕಾಬೂಲ್, ನ 3: ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್‌ನ ಮಿಲಿಟರಿ ಆಸ್ಪತ್ರೆಯೊಂದರ ಬಳಿ ನಡೆದ ಬಾಂಬ್ ಸ್ಫೋಟ ಹಾಗೂ ಗುಂಡಿನ ದಾಳಿಯಲ್ಲಿ ಕನಿಷ್ಠ 20 ಮಂದಿ ಸಾವನ್ನಪ್ಪಿ, 16ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
400 ಹಾಸಿಗೆಗಳ ಸರ್ದಾರ್ ದಾವೂದ್ ಖಾನ್ ಸೇನಾ ಆಸ್ಪತ್ರೆಯ ಮುಂಭಾಗದಲ್ಲಿ ಈ ಬಾಂಬ್ ದಾಳಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಂತರ, ಬಂದೂಕುಧಾರಿಗಳು ಆಸ್ಪತ್ರೆಗೆ ಪ್ರವೇಶಿಸಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಮಂಗಳವಾರ ನಡೆದ ದಾಳಿಯ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ ಅಂಗಸಂಸ್ಥೆ IS-K ಹೊತ್ತುಕೊಂಡಿದೆ.
ದಾಳಿಯ ವೇಳೆ ತಾವು ಕೊಠಡಿಯೊಂದರಲ್ಲಿ ಅಡಗಿಕೊಂಡಿದ್ದಾಗಿ, ಆ ಸಂದರ್ಭದಲ್ಲಿ ಗುಂಡಿನ ಕಾಳಗದ ಸದ್ದು ಕೇಳಿಬರುತ್ತಿತ್ತು ಎಂದು ವೈದ್ಯರೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಆಸ್ಪತ್ರೆಯ ಗೇಟ್ ಬಳಿ ಬಾಂಬ್ ಸ್ಫೋಟಗೊಂಡ ನಂತರ ಐಸಿಸ್ ಉಗ್ರರು ಆಸ್ಪತ್ರೆಗೆ ಪ್ರವೇಶಿಸಿದ್ದಾರೆ ಎಂದು ತಾಲಿಬಾನ್ ವಕ್ತಾರ ಬಿಲಾಲ್ ಕರಿಮಿ ಬಿಬಿಸಿಗೆ ತಿಳಿಸಿದ್ದಾರೆ.
ತಾಲಿಬಾನ್ ನಡೆಸಿದ ಪ್ರತಿದಾಳಿಯಲ್ಲಿ ನಾಲ್ವರು ಐಎಸ್-ಕೆ ಉಗ್ರರನ್ನು ಹತ್ಯೆ ನಡೆಸಿದ್ದು, ಒಬ್ಬನನ್ನು ಜೀವಂತವಾಗಿ ಸೆರೆಹಿಡಿಯಲಾಗಿದೆ ಎಂದು ಕರಿಮಿ ಹೇಳಿದ್ದಾರೆ.