ಸಿರಿಯಾದಲ್ಲಿ ಐಸಿಸ್ ಮತ್ತು ಕುರ್ದಿಶ್ ಪಡೆಗಳ ನಡುವೆ ರಕ್ತಸಿಕ್ತ ಸಂಘರ್ಷ: 136 ಸಾವು
ಅಲ್-ಹಸಾಕಾ: ಜನೆವರಿ 24 ಇಸ್ಲಾಮಿಕ್ ಸ್ಟೇಟ್ (ಐಸಿಸ್) ಭಯೋತ್ಪಾದಕರು ಮತ್ತು ಕುರ್ದಿಶ್ ಪಡೆಗಳ ನಡುವಿನ ನಾಲ್ಕು ದಿನಗಳ ಸಿರಿಯಾದ ಸಂಘರ್ಷದಲ್ಲಿ ಭಾನುವಾರದವರೆಗೆ 136 ಜನರು ಸಾವನ್ನಪ್ಪಿದ್ದಾರೆ. ಗುರುವಾರದಿಂದಲೇ ಭಯೋತ್ಪಾದಕರು ಮತ್ತು ಕುರ್ದಿಷ್ ಸೇನೆಯ ನಡುವೆ ಕಾಳಗ ಆರಂಭವಾಗಿದೆ. 100ಕ್ಕೂ ಹೆಚ್ಚು ಐಸಿಸ್ ಭಯೋತ್ಪಾದಕರು ತಮ್ಮ ಸಹಚರರನ್ನು ಬಿಡುಗಡೆ ಮಾಡಲು ಸಿರಿಯಾದ ಅಲ್-ಹಸಾಕಾ ನಗರದ ಘವ್ರಾನ್ ಜೈಲಿನ ಮೇಲೆ ದಾಳಿ ನಡೆಸಿದ್ದರು. ಐಸಿಸ್ ಭಯೋತ್ಪಾದಕರ ದಾಳಿ ಬಳಿಕ ಕುರ್ದಿಷ್ ಪಡೆಗಳು ಪ್ರತಿದಾಳಿ ನಡೆಸಿ ಪರಿಸ್ಥಿತಿ ಹತೋಟಿಗೆ ತರಲು ಯತ್ನಿಸಿದರು.
ಬ್ರಿಟನ್‌ನ ಮಾನವ ಹಕ್ಕುಗಳ ಸಿರಿಯನ್ ಆಬ್ಜರ್ ವೇಟಿ ಪ್ರಕಾರ, ಐಸಿಸ್ ಉಗ್ರರು ಜೈಲಿನ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ, ತಮ್ಮ ಸಹಚರರನ್ನು ಬಿಡುಗಡೆ ಮಾಡಿದರಲ್ಲದೆ, ಸಾಕಷ್ಟು ಶಸ್ತ್ರಾಸ್ತ್ರಗಳನ್ನು ಲೂಟಿ ಮಾಡಿದ್ದಾರೆ. ಇಸ್ಲಾಮಿಕ್ ಸ್ಟೇಟ್ ಮತ್ತೊಮ್ಮೆ ಸಿರಿಯಾದಲ್ಲಿ ತನ್ನ ಹಿಡಿತವನ್ನು ಬಲಪಡಿಸಲು ಪ್ರಯತ್ನಿಸುತ್ತಿದೆ ಎಂದು ಹೇಳಿದೆ. ಈ ಕಾರ್ಯಾಚರಣೆಯಲ್ಲಿ ಇತ್ತೀಚಿನ ತಿಂಗಳುಗಳಲ್ಲಿ ಇದಕ್ಕೆ ಸಂಬಂಧಿಸಿದ ಅನೇಕ ‘ಸ್ಲೀಪರ್ ಸೆಲ್‌ಗಳು’ ಸಹ ಸಿರಿಯಾದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ.
ಕುರ್ದಿಶ್ ಸಿರಿಯನ್ ಡೆಮಾಕ್ರಟಿಕ್ ಫೋರ್ಸಸ್ ನೀಡಿರುವ ಮಾಹಿತಿ ಪ್ರಕಾರ, ಜೈಲಿನ ಸುತ್ತಲಿನ ಪ್ರದೇಶದ ಮೇಲೆ ಹೆಚ್ಚು ನಿಗಾ ಇರಿಸಲಾಗಿದೆ. ಭಯೋತ್ಪಾದಕರು ಹೆಚ್ಚು ದಿನಗಳು ಬದುಕಲು ಸಾಧ್ಯವಿಲ್ಲ ಎಂದು ಹೇಳಿದೆ. ಮಾಧ್ಯಮ ವರದಿಗಳ ಪ್ರಕಾರ, ಈ ದಾಳಿ ವೇಳೆ ಇದುವರೆಗೆ 84 ಐಸಿಸ್ ಭಯೋತ್ಪಾದಕರು ಮತ್ತು 45 ಕುರ್ದಿಶ್ ಯೋಧರು ಹತರಾಗಿದ್ದಾರೆ. ಪ್ರಾಣ ಕಳೆದುಕೊಂಡವರಲ್ಲಿ 7 ನಾಗರಿಕರೂ ಸಹ ಸೇರಿದ್ದಾರೆ ಎಂದು ಹೇಳಿದೆ.