ಹುಟ್ಟು ಮತ್ತು ಸಾವು ಪ್ರಕೃತಿಯ ನಿಯಮವಾಗಿದ್ದು, ಇವೆರಡರ ನಡುವಿನ ಬದುಕನ್ನು ಸಾರ್ಥಕಪಡಿಸಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ
ಲೋಕದರ್ಶನ ವರದಿ
ಮಾಂಜರಿ 19 : ಹುಟ್ಟು ಮತ್ತು ಸಾವು ಪ್ರಕೃತಿಯ ನಿಯಮವಾಗಿದ್ದು, ಇವೆರಡರ ನಡುವಿನ ಬದುಕನ್ನು ಸಾರ್ಥಕಪಡಿಸಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಗೋಕಾಕ್ ತಾಲೂಕಿನ ಕರಪಟ್ಟಿ ಗ್ರಾಮದ ಕಳ್ಳಿಗುದ್ದಿ ಮಠದ ಪರಮಪೂಜ್ಯ ಬ್ರಹ್ಮಶ್ರೀ ಬಸವರಾಜ್ ಮಹಾಸ್ವಾಮಿಗಳು ಹೇಳಿದರು. ಅವರು ಬುಧವಾರರಂದು ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದ ಶಿವಾಲಯದಲ್ಲಿ ಶ್ರಾವಣ ಮಾಸದ ನಿಮಿತ್ಯ ಆಯೋಜಿಸಲಾದ ಪ್ರವಚನ ಕಾರ್ಯಕ್ರಮದಲ್ಲಿ ಚಿದಾನಂದ ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಕೋರೆ ಇವರ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.
ಭೂಮಿಯಲ್ಲಿ 84 ಲಕ್ಷ ಜೀವ ರಾಶಿಗಳಿದ್ದು, ಅವುಗಳಿಗೆ ದೊರೆಯದ ಅರಿವಿನ ಶಕ್ತಿಯನ್ನು ಮನುಷ್ಯನಿಗೆ ನೀಡಲಾಗಿದೆ. ಈ ಮಾನವ ಜನ್ಮವನ್ನು ಸಾರ್ಥಕಪಡಿಸಿಕೊಳ್ಳಲು ಹಸಿದವರಿಗೆ ಅನ್ನ, ಬಾಯಾರಿದವರಿಗೆ ನೀರು, ಮಾನ ಮುಚ್ಚಿಕೊಳ್ಳಲು ಬಟ್ಟೆ ನೀಡಿ, ಸಂಕಷ್ಟದಲ್ಲಿರುವವರಿಗೆ ನೆರವಾಗಬೇಕು. ನಾವು ನಮ್ಮನ್ನು ಪ್ರೀತಿಸುವಂತೆ ಇತರರನ್ನೂ ಪ್ರೀತಿಸಬೇಕು ಎಂದರು. ಈ ವೇಳೆ ಚಿದಾನಂದ ಅವರೇ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಕೋರೆ ಮಾತನಾಡಿ ನಾವು ಸಂಕಷ್ಟದಲ್ಲಿದ್ದಾಗ ನೆರವಾಗುವುದು ಧರ್ಮ. ನಾವು ಮಾಡುವ ಪೂಜೆಯನ್ನು ದೇವರು ನೋಡುತ್ತಾನೆಯೋ ಇಲ್ಲವೋ ಗೊತ್ತಿಲ್ಲ; ಆದರೆ ನಾವು ಮಾಡುವ ಉತ್ತಮ ಕಾರ್ಯಗಳನ್ನು ಖಂಡಿತ ನೋಡುತ್ತಾನೆ.
ಆದ್ದರಿಂದ ದುಷ್ಟ ಆಲೋಚನೆಗಳನ್ನು ದೂರವಿಟ್ಟು ಧರ್ಮದ ಹಾದಿಯಲ್ಲಿ ಬದುಕಬೇಕು. ಪ್ರವಚನ ಆಲಿಸಿ, ಉತ್ತಮ ಕಾರ್ಯಗಳಲ್ಲಿ ತೊಡಗಿಸಿಕೊಂಡಾಗ ಹರಿಜಾತ್ರೆಯ ಸಾರ್ಥಕವಾಗುತ್ತದೆ ಎಂದು ಹೇಳಿದರು. ಈ ವೇಳೆ ಬ್ರಹ್ಮಶ್ರೀ ಬಸವರಾಜ್ ಸ್ವಾಮೀಜಿಗಳ ಹಸ್ತದಿಂದ ಮಲ್ಲಿಕಾರ್ಜುನ್ ಕೋರೆಯವರನ್ನು ಸನ್ಮಾನಿಸಲಾಯಿತು ಈ ಕಾರ್ಯಕ್ರಮಕ್ಕೆ ಅಣ್ಣಸಾಹೇಬ್ ಜಾಖತೆ ವಿವೇಕ್ ನಷ್ಟೇ ಕುಮಾರ್ ಕೋರೆ ತಮ್ಮಣ್ಣ ಗುಂಡಕಲ್ಲೆ ನಾಗೇಶ್ ಮಜುಕರ್ ಪ್ರಶಾಂತ ಕೋರೆ ಮಾರುತಿ ಕಂಬಾರ್ ಪ್ರಧಾನಿ ಮಗದುಮ್ ಶಿವಾನಂದ ಕೋರೆ ಶಂಕರ್ ಮಗದುಮ್ ಗಂಗೂಬಾಯಿ ತಾವದಾರೆ ಸುನೀತಾ ನಾಗರಾಳೆ ಸುಧಾ ಪಾಟೀಲ್ ಗಿರಿಜಾ ಪಾಟೀಲ್ ಹಾಗೂ ಇನ್ನಿತರರು ಹಾಜರಿದ್ದರು