ಬೈಡನ್ - ಜಿನ್‌ಪಿಂಗ್ ಭೇಟಿಗೆ ರಂಗ ಸಿದ್ದ
ವಾಷಿಂಗ್ಟನ್, ನ 13: ಬಹು ನಿರೀಕ್ಷಿತ ಅಮೆರಿಕಾ ಅಧ್ಯಕ್ಷ ಜೋ ಬಿಡನ್, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರೊಂದಿಗಿನ ಮಹತ್ವದ ಸಭೆಗೆ ರಂಗ ಸಜ್ಜುಗೊಂಡಿದೆ. ಇಬ್ಬರೂ ನಾಯಕರು ಸೋಮವಾರ ಸಂಜೆ ವರ್ಚುವಲ್ ಮಾದರಿಯಲ್ಲಿ ಭೇಟಿಯಾಗಲಿದ್ದಾರೆ. ವಿಡಿಯೋ ಕಾಲ್ ಮೂಲಕ ಉಭಯ ನಾಯಕರು ಮಾತನಾಡಲಿದ್ದಾರೆ. ಬೈಡೆನ್ ಅಮೆರಿಕಾ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಚೀನಾದೊಂದಿಗಿನ ಸಂಬಂಧ ಹದಗೆಟ್ಟಿದೆ ಎಂಬ ವಾದಗಳು ಕೇಳಿಬರುತ್ತಿವೆ. ಉಭಯ ದೇಶಗಳ ನಡುವೆ ಉದ್ವಿಗ್ನತೆ ಮುಂದುವರಿದಿದೆ. ಈ ಹಂತದಲ್ಲಿ ಬೈಡೆನ್ ಹಾಗೂ ಜಿನ್‌ಪಿಂಗ್ ಸಮಾವೇಶದ ಬಗ್ಗೆ ವ್ಯಾಪಕ ಆಸಕ್ತಿ ಕೆರಳಿಸಿದೆ.
ಈ ಭೇಟಿಯಿಂದ ವಿಸ್ಮಯ ಸಂಭವಿಸಲಿದೆ ಎಂದು ನಾವು ನಿರೀಕ್ಷಿಸುವುದಿಲ್ಲ ಎಂದು ಶ್ವೇತಭವನದ ಅಧಿಕಾರಿಗಳು ಪರೋಕ್ಷ ಇಂಗಿತ ವ್ಯಕ್ತಪಡಿಸದ್ದಾರೆ. ಅಮೆರಿಕಾ ಮತ್ತು ಚೀನಾದ ಸಾಮಾನ್ಯ ಹಿತಾಸಕ್ತಿಗಳನ್ನು ರಕ್ಷಿಸಲು ಒಟ್ಟಿಗೆ ಕೆಲಸ ಮಾಡುವ ಕುರಿತು ಬೈಡೆನ್, ಜಿನ್‌ಪಿಂಗ್ ಒಂದು ಒಪ್ಪಂದಕ್ಕೆ ಬರುವ ಸಾಧ್ಯತೆಯಿದೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್ ಸಾಕಿ ಹೇಳಿದ್ದಾರೆ. ಅಮೆರಿಕಾ ಉದ್ದೇಶಗಳು, ಆದ್ಯತೆಗಳನ್ನು ಚೀನಾ ಅಧ್ಯಕ್ಷರ ಗಮನಕ್ಕೆ ತರುವುದಾಗಿ ಬೈಡೆನ್ ಹೇಳಿದ್ದಾರೆ. ಈ ವರ್ಷದ ಫೆಬ್ರವರಿಯಿಂದ ಉಭಯ ನಾಯಕರು ಮಾತನಾಡುತ್ತಿರುವುದು ಇದು ಮೂರನೇ ಬಾರಿ. ಉಭಯ ದೇಶಗಳ ನಡುವಿನ ಸಂಬಂಧವನ್ನು ಪುನಃಸ್ಥಾಪಿಸಲು ಅಮೆರಿಕಾ ಸಹಕಾರ ನೀಡಲಿದೆ ಎಂದು ತಾನು ಆಶಿಸುವುದಾಗಿ ಚೀನಾ ಹೇಳಿದೆ.