ಸೌಂದತ್ತಿ

ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಭೂಮಿಪೂಜೆ

ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಭೂಮಿಪೂಜೆ

ಸವದತ್ತಿ 10: ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಭಾಗಗಳಲ್ಲಿ ಹಾಗೂ ಶ್ರೀ ಕ್ಷೇತ್ರ ಯಲ್ಲಮ್ಮಾ ದೇವಸ್ಥಾನದಲ್ಲಿ ಬುಧವಾರದಂದು ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಹಲವಾರು ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು.

ಲೋಕೋಪಯೋಗಿ ಇಲಾಖೆಯ ಲೆಕ್ಕ ಶಿರ್ಷಿಕೆ 5054ರಲ್ಲಿ 4.95 ಕೋಟಿ ರೂ.ಗಳಲ್ಲಿ ಪಟ್ಟಣದಲ್ಲಿ ಹಾದು ಹೋಗುವ ಸಿಂಧನೂರ ಹೆಮ್ಮಡಗಾ ರಾಜ್ಯ ಹೆದ್ದಾರಿಯ ರಸ್ತೆ ಸುಧಾರಣೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಯಿತು.

ಕಾಡಾ ಇಲಾಖೆಯಿಂದ ಯಡ್ರಾಂವಿ ಗ್ರಾಮದಲ್ಲಿ 3.5ಕೋಟಿ ರೂ.ಗಳಲ್ಲಿ ಕಾಲಬಂದ ರಸ್ತೆ ಅಭಿವೃದ್ದಿ ಹಾಗೂ ಬೆಡಸೂರ ಗ್ರಾಮದ ಮುಖ್ಯ ರಸ್ತೆಯಿಂದ ಚಿದಂಬರೇಶ್ವರ ದೇವಸ್ಥಾನದವರೆಗೆ 2ಕೋಟಿ ರೂ.ಗಳಲ್ಲಿ ರಸ್ತೆ ಅಭಿವೃದ್ದಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಯಿತು. ಸಣ್ಣ ನೀರಾವರಿ ಇಲಾಖೆಯಿಂದ ಹಂಚಿನಾಳ ಗ್ರಾಮದಲ್ಲಿ 2ಕೋಟಿ ರೂ.ಗಳಲ್ಲಿ ಕೆರೆ ಅಭಿವೃದ್ದಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.

ಶ್ರೀ ಕ್ಷೇತ್ರ ಯಲ್ಲಮ್ಮನಗುಡ್ಡದಲ್ಲಿ ಲೋಕೋಪಯೋಗಿ ಇಲಾಖೆಯ ಲೆಕ್ಕ ಶಿರ್ಷಿಕೆ 8443 ಠೇವಣಿ ವಂತಿಗೆ ಕರ್ನಾಟಕ ಪ್ರವಾಸೋದ್ಯಮ ವಿಜನ್ ಗ್ರುಪ್ ಅಡಿಯಲ್ಲಿ 17 ಕೋಟಿ ರೂ.ಗಳಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು. 

ನಂತರ ಮಾತನಾಡಿದ ವಿಧಾನಸಭೆ ಉಪಾಧ್ಯಕ್ಷ ಆನಂದ ಮಾಮನಿಯವರು ಶ್ರೀಕ್ಷೇತ್ರದಲ್ಲಿ ಯಾತ್ರಿಕರಿಗೆ ಅವಶ್ಯಕ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಅಭಿವೃದ್ದಿಗಳನ್ನು ಮಾಡಲಾಗುತ್ತಿದೆ ಎಂದರು.  10ಕೋಟಿ ರೂ.ಗಳಲ್ಲಿ ಪ್ರತಿ ಕೊಠಡಿಯಲ್ಲಿ 15 ಜನರು ಇರುವಂತ ವಿಸ್ತಾರವಾದಂತ 24 ಕೊಠಡಿ ಹಾಗೂ 18 ಜನರು ಇರುವಂತ 18 ವಿಸ್ತಾರವಾದ ಕೊಠಡಿಗಳನ್ನು ನಿರ್ಮಿಸಲಾಗುತ್ತಿದೆ ಎಂದರು. 2ಕೋಟಿ ರೂ.ಗಳ ವೆಚ್ಚದಲ್ಲಿ 150 ನಾಲ್ಕುಚಕ್ರದ ವಾಹನಗಳ ಹಾಗೂ 500 ದ್ವಿಚಕ್ರ ವಾಹನಗಳ ನಿಲುಗಡೆ ವ್ಯವಸ್ಥೆಗೆ ನಿವೇಶನ ಅಭಿವೃದ್ದಿಗೊಳಿಸಲಾಗುತ್ತಿದ್ದು, 5ಕೋಟಿ ರೂ.ಗಳಲ್ಲಿ ಡಾರ್ಮೆಂಟರಿ, ಸಮುದಾಯ ಶೌಚಾಲಯ, ಸ್ನಾಗೃಹಗಳು ಹಾಗೂ ಲಗೇಜ್ ಕೊಠಡಿಗಳ ನಿರ್ಮಾಣ ಮಾಡುವ ಯೋಜನೆಯನ್ನು ಹೊಂದಲಾಗಿದೆ ಎಂದರು.

ಪುರಸಭೆ ಅಧ್ಯಕ್ಷ ರಾಜಶೇಖರ ಕಾರದಗಿ, ಪಿಎಲ್‍ಡಿ ಬ್ಯಾಂಕ ಅಧ್ಯಕ್ಷ ಜಗದೀಶ ಶಿಂತ್ರಿ, ಪುರಸಭೆ ಸದಸ್ಯರಾದ ಸಂಗಮೇಶ ಹಾದಿಮನಿ, ಅರ್ಜುನ ಅಮ್ಮೋಜಿ, ಐ.ಪಿ.ಪಾಟೀಲ, ಬಾಬು ಕಾಳೆ, ಎಲ್.ಆರ್.ಕುಲಕರ್ಣಿ, ಯಲ್ಲಪ್ಪ ರುದ್ರಾಕ್ಷಿ, ಮುಖ್ಯಾಧಿಕಾರಿ ಪ್ರಕಾಶ ಚೆನ್ನಪ್ಪನವರ, ಲೋಕೋಪಯೋಗಿ ಇಲಾಖೆ ಇಂಜನೀಯರ ಕದ್ರಾಪುರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.


ಸುದ್ದಿ ಓದಿ