ತೌಹಿದ್, ನಾಗರಾಜ ಅಚಾರಿ ವಿರುದ್ಧವೂ ಪ್ರಕರಣ ದಾಖಲು

ತೌಹಿದ್, ನಾಗರಾಜ ಅಚಾರಿ ವಿರುದ್ಧವೂ ಪ್ರಕರಣ ದಾಖಲು Attempt to Sell Ganja: Accused Arrested

ಕಾರವಾರ, ಆ. 19: ಹೊನ್ನಾವರ ಪಟ್ಟಣದ ಬಂದರು ರಸ್ತೆಯ ಮಹಾಲಕ್ಷ್ಮೀ ಗ್ಯಾಸ್ ಗೋಡೌನ್ ಸಮೀಪ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪದ ಮೇಲೆ ಹೊನ್ನಾವರ ಪೊಲೀಸರು ಮಹಮ್ಮದ್ ಅಲ್ತಾಫ್ (30) ಎಂಬಾತನನ್ನು ಬಂಧಿಸಿದ್ದಾರೆ.

ಹೊನ್ನಾವರದ ಕಾಸರಕೋಡ ಟೊಂಕಾ-2 ನಿವಾಸಿಯಾಗಿರುವ ಅಲ್ತಾಫ್‌ನಿಂದ 116 ಗ್ರಾಂ ಗಾಂಜಾ ಹಾಗೂ ಗಾಂಜಾ ಪ್ಯಾಕಿಂಗ್‌ಗೆ ಬಳಸಲಾಗುತ್ತಿದ್ದ ಖಾಲಿ ಪ್ಲಾಸ್ಟಿಕ್ ಕವರ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಬಂದರು ರಸ್ತೆಯಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಅಲ್ತಾಫ್‌ಗೆ ಗಾಂಜಾ ಪೂರೈಸಿದ ಆರೋಪದ ಮೇಲೆ ತೌಹಿದ್ ಹಾಗೂ ನಾಗರಾಜ ಅಚಾರಿ ಎಂಬವರ ಹೆಸರುಗಳನ್ನು ಬಹಿರಂಗಪಡಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಮಾಹಿತಿ ಆಧರಿಸಿ ಮಹಮ್ಮದ್ ಅಲ್ತಾಫ್ ಸೇರಿದಂತೆ ಮೂವರ ವಿರುದ್ಧ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತೌಹಿದ್ ಹಾಗೂ ನಾಗರಾಜ ಅಚಾರಿ ಬಂಧನಕ್ಕಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.