ಅಥಣಿ ಶುಗರ್ಸ್ ಕಾರ್ಖಾನೆಯ 26ನೇ ಕಬ್ಬು ನುರಿಸುವ ಹಂಗಾಮಿಗೆ ಚಾಲನೆ
ಲೋಕದರ್ಶನ ವರದಿ
ಕಾಗವಾಡ: ಕಬ್ಬು ಬೆಳೆಗಾರ ರೈತರ ಬೇಡಿಕೆಗಳು ನ್ಯಾಯಯುತವಾಗಿದ್ದು, ಭವಿಷ್ಯದಲ್ಲಿ ಸಕ್ಕರೆ ಉದ್ಯಮ ಹಾಗೂ ಕಬ್ಬು ಬೆಳೆಗಾರ ರೈತರು ಉಳಿಯಬೇಕಾದರೇ ಕೇಂದ್ರ ಸರ್ಕಾರ ಸಕ್ಕರೆಯ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಮತ್ತು ಇಥೆನಾಲ್ ಖರೀದಿ ದರವನ್ನು ಹೆಚ್ಚಿಸಬೇಕು. ರೈತರ ಹೋರಾಟಕ್ಕೆ ನನ್ನ ಬೆಂಬಲವಿದೆ ಎಂದು ಅಥಣಿ ಶುಗರ್ಸ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಹಾಗೂ ಮಾಜಿ ಸಚಿವ ಶ್ರೀಮಂತ ಪಾಟೀಲ ತಿಳಿಸಿದ್ದಾರೆ.
ಅವರು, ಸೋಮವಾರ ದಿ. 12 ರಂದು ತಾಲೂಕಿನ ಕೆಂಪವಾಡ ಗ್ರಾಮದ ಅಥಣಿ ಶುಗರ್ಸ ಸಕ್ಕರೆ ಕಾರ್ಖಾನೆಯ ಬಾಯ್ಲರ್ ಪ್ರದೀಪನ ಹಾಗೂ ಕಬ್ಬಿನ ಕ್ಯಾರಿಯರ್‌ಗೆ ಪೂಜೆ ನೆರವೇರಿಸಿ, 2026-27 ನೇ ಸಾಲಿನ 26 ನೇ ಕಬ್ಬು ನುರಿಸುವ ಹಂಗಾಮಿಗೆ ಚಾಲನೆ ನೀಡಿ ಮಾತನಾಡುತ್ತಿದ್ದರು.
ನಾನು ಕೂಡ ಒಬ್ಬ ರೈತನಾಗಿದ್ದು, ಇಂದಿನ ದಿನಗಳಲ್ಲಿ ಅಗತ್ಯ ವಸ್ತುಗಳು ಬೆಲೆಗಳು ಗಗನಕ್ಕೇರಿವೆ. ಜೊತೆಗೆ ಕೃಷಿ ಪೂರಕವಾದ ಗೊಬ್ಬರ, ಕೀಟನಾಶಕ, ಕಾರ್ಮಿಕರ ವೇತನವೂ ಹೆಚ್ಚಾಗಿವೆ, ಇದರಿಂದ ರೈತರ ಆರ್ಥಿಕ ಪರಿಸ್ಥಿತಿ ಚಿಂತಾಜನಕವಾಗಿದ್ದು, ರೈತರು ನೆಮ್ಮದಿಯಿಂದ ಬದುಕಬೇಕಾದರೆ ರೈತರ ನ್ಯಾಯಸಮ್ಮತ ಬೇಡಿಕೆಗಳನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿ ಈಡೇರಿಸಬೇಕು ಎಂದು ಹೇಳಿದರು.
ದೇಶದಲ್ಲಿ ಸಕ್ಕರೆಗೆ ಹೆಚ್ಚಿನ ಬೇಡಿಕೆಯಿದ್ದು, ಕಬ್ಬು ಬೆಳೆಗಾರರು ಕಬ್ಬು ಬೆಳೆಯುವುದನ್ನು ಬಿಟ್ಟು ಪರ್ಯಾಯ ಬೆಳೆಗಳತ್ತ ಮುಖ ಮಾಡಿದರೇ ಸಕ್ಕರೆ ಉದ್ಯಮದ ಮೇಲೆ ಗಂಭೀರ ಪರಿಣಾಮ ಉಂಟಾಗಲಿದೆ. ದೇಶದ ಸುಮಾರು 140 ಕೋಟಿ ಜನರ ಸಕ್ಕರೆ ಅಗತ್ಯವನ್ನು ಪೂರೈಸುವಲ್ಲಿ ಕಬ್ಬು ಬೆಳೆಗಾರರ ಪಾತ್ರ ಮಹತ್ವದ್ದಾಗಿದೆ. ಆದ್ದರಿಂದ ರೈತರ ಹಿತಾಸಕ್ತಿ ಕಾಪಾಡುವುದರ ಜೊತೆಗೆ ಸಕ್ಕರೆ ಉದ್ಯಮದ ಉಳಿವಿಗೂ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಸರ್ಕಾರ ಸಕ್ಕರೆಗೆ ಎಷ್ಟು ಬೆಂಬಲ ಬೆಲೆಯನ್ನು ನಿಗದಿಪಡಿಸುತ್ತದೆಯೋ, ಅದರ ಪ್ರಕಾರ ನಮ್ಮ ಕಾರ್ಖಾನೆ ರೈತರ ಕಬ್ಬಿಗೆ ಬೆಲೆ ನೀಡಲು ಸಿದ್ಧವಿದೆ. ನಮ್ಮ ಕಾರ್ಖಾನೆಯ ಕಬ್ಬು ನುರಿಸುವ ಸಾಮರ್ಥ್ಯವನ್ನು 12 ಸಾವಿರ ಟನ್‌ನಿಂದ 18 ಸಾವಿರ ಟನ್‌ಗೆ ಹೆಚ್ಚಿಸಲಾಗಿದೆ. ಆದ್ದರಿಂದ ಮುಂಬರುವ ಹಂಗಾಮಿನಲ್ಲಿ ರೈತರು ಎಂದಿನಂತೆ ಕಬ್ಬು ಪೂರೈಸಿ, ಸಹಕರಿಸಬೇಕು ಎಂದು ರೈತರಲ್ಲಿ ಮನವಿ ಮಾಡಿದರು.