ಪಾಕಿಸ್ತಾನದಲ್ಲಿ ಇಬ್ಬರು ಸಿಖ್ ನಾಗರಿಕರ ಹತ್ಯೆ
ಇಸ್ಲಾಮಾಬಾದ್: ಮೇ 15 : ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಪೇಶಾವರದ ಹೊರವಲಯದಲ್ಲಿ ಅಲ್ಪಸಂಖ್ಯಾತ ಸಿಖ್ ಸಮುದಾಯದ ಇಬ್ಬರು ಸದಸ್ಯರನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ. ಪೊಲೀಸರನ್ನು ಉಲ್ಲೇಖಿಸಿ ಸ್ಥಳೀಯ ಮಾಧ್ಯಮಗಳು ಇಂದು ಈ ಮಾಹಿತಿ ನೀಡಿವೆ.
ಘಟನೆಯನ್ನು ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ತೀವ್ರವಾಗಿ ಖಂಡಿಸಿದ್ದಾರೆ. ನಾಗರಿಕರ, ವಿಶೇಷವಾಗಿ ಅಲ್ಪಸಂಖ್ಯಾತರ ಜೀವನ ಮತ್ತು ಆಸ್ತಿಯ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಮುಖ್ಯಮಂತ್ರಿಗಳಿಗೆ ಸೂಚಿಸಿದರು. ಅಪರಾಧಿಗಳನ್ನು ಬಂಧಿಸಲು ಪೊಲೀಸ್ ಮಹಾನಿರೀಕ್ಷಕರಿಗೆ ಆದೇಶಿಸಿದ್ದಾರೆ.
ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ-ಜರ್ದಾರಿ ಅವರು ಅಪರಾಧಿಗಳನ್ನು ತಕ್ಷಣವೇ ಬಂಧಿಸುವಂತೆ ಸೂಚಿಸಿದ್ದಾರೆ ಎಂದು ಡಾನ್ ಪತ್ರಿಕೆ ಉಲ್ಲೇಖಿಸಿದೆ. ದೇಶದಲ್ಲಿ ಸರ್ವಧರ್ಮ ಸೌಹಾರ್ದತೆ ಕದಡಲು ಮತ್ತು ರಾಷ್ಟ್ರೀಯ ಐಕ್ಯತೆಗೆ ಧಕ್ಕೆ ತರಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದರು.
ಮೃತರನ್ನು 42 ವರ್ಷದ ಸುಲ್ಜಿತ್ ಸಿಂಗ್ ಮತ್ತು 38 ವರ್ಷದ ರಂಜಿತ್ ಸಿಂಗ್ ಎಂದು ಗುರುತಿಸಲಾಗಿದೆ ಎಂದು ಪೇಶಾವರ ಕ್ಯಾಪಿಟಲ್ ಸಿಟಿ ಪೊಲೀಸ್ ಅಧಿಕಾರಿ ಎಜಾಜ್ ಖಾನ್ ತಿಳಿಸಿದ್ದಾರೆ. ಪೇಶಾವರದ ಸರ್ಬಂದ್‌ನಲ್ಲಿರುವ ಬಟಾ ತಾಲ್ ಪ್ರದೇಶದಲ್ಲಿ ಮೃತರು ಮಸಾಲೆ ಅಂಗಡಿಗಳನ್ನು ಹೊಂದಿದ್ದರು ಎಂದು ಅವರು ಹೇಳಿದರು.
ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಖಾನ್ ಹೇಳಿದ್ದಾರೆ. ಅಧಿಕಾರಿಗಳು ಸ್ಥಳದಿಂದ ಸಾಕ್ಷ್ಯ ಸಂಗ್ರಹಿಸುತ್ತಿದ್ದಾರೆ. ಘಟನೆಯಲ್ಲಿ ಭಾಗಿಯಾದವರನ್ನು ಶೀಘ್ರವೇ ಹಿಡಿಯಲಾಗುವುದು ಎಂದರು.