ಪೇಶಾವರದ ಸಿಖ್ ವೈದ್ಯ ಹತ್ಯೆ; ಹೊಣೆ ಹೊತ್ತ ಇಸ್ಲಾಮಿಕ್ ಸ್ಟೇಟ್-ಖೋರಾಸನ್
ಕಾಬೂಲ್, ಅ 1: ಅಫ್ಘಾನಿಸ್ತಾನವನ್ನು ನೆಲೆಯಾಗಿಸಿಕೊಂಡಿರುವ ಇಸ್ಲಾಮಿಕ್ ಸ್ಟೇಟ್-ಖೋರಾಸನ್, ಕಳೆದ ಆಗಸ್ಟ್ 15ರಂದು ತಾಲಿಬಾನಿಗಳು ಕಾಬೂಲ್ ವಶಪಡಿಸಿಕೊಂಡ ನಂತರ ಹಲವು ಅಫ್ಘನ್ ನಗರಗಳಲ್ಲಿ ತನ್ನ ದಾಳಿಗಳನ್ನು ತೀವ್ರಗೊಳಿಸಿದೆ. ಆಗಸ್ಟ್ 26 ರಂದು ಕಾಬೂಲ್ ವಿಮಾನ ನಿಲ್ದಾಣದಲ್ಲಿ ನಡೆಸಿದ ಭಯಾನಕ ಆತ್ಮಾಹುತಿ ದಾಳಿಯಲ್ಲಿ ಸುಮಾರು 170 ಅಫ್ಘನ್ ನಾಗರೀಕರು,13 ಅಮೆರಿಕಾ ಸೇನಾ ಸಿಬ್ಬಂದಿ ಮೃತಪಟ್ಟಿದ್ದರು.
ಪಾಕಿಸ್ತಾನದ ವಾಯುವ್ಯ ನಗರ ಪೇಶಾವರದಲ್ಲಿ ಯುನಾನಿ ವೈದ್ಯ ಸಿಖ್ ವ್ಯಕ್ತಿಯನ್ನು ಹತ್ಯೆ ಮಾಡಿದ್ದ ಕೃತ್ಯದ ಹೊಣೆ ತನ್ನದೇ ಇಸ್ಲಾಮಿಕ್ ಸ್ಟೇಟ್-ಖೋರಾಸನ್ ಗುರುವಾರ ಹೇಳಿಕೊಂಡಿದೆ.
ಸರ್ದಾರ್ ಸತ್ನಾಮ್ ಸಿಂಗ್ (45) ಅವರ ಕ್ಲಿನಿಕ್‌ನಲ್ಲಿದ್ದಾಗ ಅಪರಿಚಿತ ವ್ಯಕ್ತಿಗಳು ಅವರನ್ನು ಕೊಠಡಿಯಿಂದ ಹೊರಗೆಳೆದು ನಾಲ್ಕು ಬಾರಿ ಗುಂಡು ಹಾರಿಸಿದ್ದರು, ನಂತರ ಅವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು. ಹಂತಕರು ಸ್ಥಳದಿಂದ ಪರಾರಿಯಾಗಿದ್ದರು ಎಂದು ಪೊಲೀಸರು ಹೇಳಿದ್ದರು.
ಗುರುವಾರ ತಡರಾತ್ರಿ ಇಸ್ಲಾಮಿಕ್ ಸ್ಟೇಟ್-ಖೋರಾಸನ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ಸಂದೇಶದಲ್ಲಿ, ಸಿಂಗ್ ಹತ್ಯೆ ಮಾಡಿದ್ದು ತಾನೇ ಎಂದು ಹೇಳಿಕೊಂಡಿದೆ.
ಸಿಂಗ್ ಅವರು ಪೇಶಾವರದ ಸಿಖ್ ಸಮುದಾಯದ ಪ್ರಮುಖ ವ್ಯಕ್ತಿಯಾಗಿದ್ದರು. ಖೈಬರ್-ಪಖ್ತುಂಖ್ವಾ ಪ್ರಾಂತ್ಯದ ರಾಜಧಾನಿ ಪೇಶಾವರದ ಚರ್ಸದ್ದಾ ರಸ್ತೆಯಲ್ಲಿ ಧರ್ಮಂದರ್ ಫಾರ್ಮಸಿ ನಡೆಸುತ್ತಿದ್ದರು. ಅವರು ಕಳೆದ 20 ವರ್ಷಗಳಿಂದ ನಗರದಲ್ಲಿ ವಾಸಿಸುತ್ತಿದ್ದರು.
ಸುಮಾರು 15,000 ಸಿಖ್ಖರು ಪೇಶಾವರದಲ್ಲಿ ವಾಸಿಸುತ್ತಿದ್ದಾರೆ, ಪೇಶಾವರದ ಸಿಖ್ ಅಲ್ಪಸಂಖ್ಯಾತರ ಬಹುತೇಕ ಸದಸ್ಯರು ಸಣ್ಣಪುಟ್ಟ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದ್ದು, ಕೆಲವರು ಔಷಧಾಲಯ ನಡೆಸುತ್ತಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಪೇಶಾವರದ ಅಲ್ಪಸಂಖ್ಯಾತ ಸಮುದಾಯದ ಹಲವು ಸದಸ್ಯರು ಭಯೋತ್ಪಾದಕ ಗುಂಪುಗಳು ಹಾಗೂ ಇತರ ಶಕ್ತಿಗಳ ದಾಳಿಗಳಿಗೆ ಗುರಿಯಾಗಿದ್ದಾರೆ. 2016 ರಲ್ಲಿ, ಪಾಕಿಸ್ತಾನ ತೆಹ್ರೀಕ್-ಇ-ಇನ್ಸಾಫ್ ಶಾಸಕ ಸೊರೆನ್ ಸಿಂಗ್ ನಗರದಲ್ಲಿ ಹತ್ಯಗೀಡಾಗಿದ್ದರು. ಪ್ರಮುಖ ಸಿಖ್ ಸಮುದಾಯದ ನಾಯಕ ಚರಣಜಿತ್ ಸಿಂಗ್ ಅವರನ್ನು 2018 ರಲ್ಲಿ ಅಪರಿಚಿತರು ಹತ್ಯೆಗೈದಿದ್ದರು. ಕಳೆದ ವರ್ಷ ಕಿರುತೆರೆ ನಿರೂಪಕ ರವೀಂದರ್ ಸಿಂಗ್ ಅವರನ್ನು ನಗರದಲ್ಲಿ ಕೊಲ್ಲಲಾಗಿತ್ತು.