ಅಂತರರಾಷ್ಟ್ರೀಯ

“ನಾವೇನು ನಿಮ್ಮ ಗುಲಾಮರಾ?” ಐರೋಪ್ಯ ರಾಷ್ಟ್ರಗಳ ವಿರುದ್ಧ ಪಾಕಿಸ್ತಾನ ಹರಿಹಾಯ್ದಿದ್ಯಾಕೆ?

“ನಾವೇನು ನಿಮ್ಮ ಗುಲಾಮರಾ?” ಐರೋಪ್ಯ ರಾಷ್ಟ್ರಗಳ ವಿರುದ್ಧ ಪಾಕಿಸ್ತಾನ ಹರಿಹಾಯ್ದಿದ್ಯಾಕೆ?

ಹೊಸದಿಲ್ಲಿ 07:  ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಟೈಮ್ ಸರಿ ಇಲ್ಲ ಅನ್ಸುತ್ತೆ… ಒಂದೆಡೆ ವಿರೋಧ ಪಕ್ಷಗಳು ಗೋ ಬ್ಯಾಕ್ ಇಮ್ರಾನ್ ಎಂದು ಪಾಕಿಸ್ತಾನದ ಗಲ್ಲಿ ಗಲ್ಲಿಯಲ್ಲಿ ಕೂಗುತ್ತಿದ್ದರೆ, ಇನ್ನೊಂದೆಡೆ ಐರೋಪ್ಯ ರಾಷ್ಟ್ರಗಳ ಒಕ್ಕೂಟ ಪಾಕಿಸ್ತಾನಕ್ಕೆ “ರಷ್ಯಾವನ್ನು ವಿರೋಧಿಸುವಂತೆ ಒತ್ತಡ” ಹೇರುತ್ತಿವೆ.ಈ ಮಧ್ಯೆ ಪಾಕಿಸ್ತಾನದ ಮೈಲ್ಸಿಯಲ್ಲಿ ನಿನ್ನೆ ರಾಲಿ ನಡೆಸಿದ ಇಮ್ರಾನ್ ಖಾನ್, ನಮ್ಮನ್ನು ಗುಲಾಮರಂತೆ ಪರಿಗಣಿಸಿದ್ದೀರಾ? ಎಂದು ಐರೋಪ್ಯ ರಾಷ್ಟ್ರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಏನಿದು ಘಟನೆ?

ಕಳೆದ ವಾರ ಪಾಕಿಸ್ತಾನದಲ್ಲಿರುವ ಪಾಶ್ಚಿಮಾತ್ಯ ರಾಯಭಾರ ಕಚೇರಿಗಳು ಉಕ್ರೇನ್ ಮೇಲಿನ ರಷ್ಯಾದ ದಾಳಿ ಖಂಡಿಸುವಂತೆ ಪಾಕಿಸ್ತಾನವನ್ನು ಒತ್ತಾಯಿಸಿದ್ದವು. ಇದಾದ ನಂತರ, ಇಮ್ರಾನ್ ಖಾನ್ ಅವರು ಪಾಶ್ಚಿಮಾತ್ಯ ರಾಷ್ಟ್ರಗಳ  ಮನವಿಗೆ ಭಾರತವನ್ನು ಉಲ್ಲೇಖಿಸಿ ಕಠಿಣ ಪದಗಳಲ್ಲಿ ಪ್ರತಿಕ್ರಿಯಿಸಿದ್ದಾರೆ. ಅಂತರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸಿ ಭಾರತವು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದಾಗ ಯಾವುದೇ ಪಾಶ್ಚಿಮಾತ್ಯ ದೇಶವು ಭಾರತದೊಂದಿಗಿನ ಸಂಬಂಧವನ್ನು ಏಕೆ ಮುರಿದುಕೊಳ್ಳಲಿಲ್ಲ ಎಂದು ಇಮ್ರಾನ್ ಖಾನ್ ಪ್ರಶ್ನೆ ಮಾಡಿದ್ದಾರೆ.ಪಾಕಿಸ್ತಾನದಲ್ಲಿರುವ ಇಯು ಸದಸ್ಯ ರಾಷ್ಟ್ರಗಳು ಸೇರಿದಂತೆ 22 ರಾಜತಾಂತ್ರಿಕ ಕಾರ್ಯಾಚರಣೆಗಳ ಮುಖ್ಯಸ್ಥರು ಮಾರ್ಚ್ 1 ರಂದು ಪಾಕಿಸ್ತಾನಕ್ಕೆ ಜಂಟಿಯಾಗಿ ಪತ್ರ ಬರೆದಿದ್ದಾರೆ. ಉಕ್ರೇನ್‌ನಲ್ಲಿ ರಷ್ಯಾ ದಾಳಿಯನ್ನು ಖಂಡಿಸುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ನಿರ್ಣಯವನ್ನು ಬೆಂಬಲಿಸುವಂತೆ ಪತ್ರದಲ್ಲಿ ಪಾಕಿಸ್ತಾನವನ್ನು ಒತ್ತಾಯಿಸಲಾಗಿತ್ತು.ಇದರಿಂದ ಕುಪಿತಗೊಂಡ ಇಮ್ರಾನ್ ಖಾನ್, ನಾವು ಪಾಶ್ಚಿಮಾತ್ಯ ದೇಶಗಳ ಗುಲಾಮರಲ್ಲ ಎಂದು ರಾಲಿಯೊಂದರಲ್ಲಿ ಹೇಳಿದ್ದಾರೆ. “ನಾನು ಯುರೋಪಿಯನ್ ಒಕ್ಕೂಟದ ರಾಯಭಾರಿಗಳನ್ನು ಕೇಳಲು ಬಯಸುತ್ತೇನೆ. ನೀವು ಭಾರತಕ್ಕೆ ಇದೇ ರೀತಿಯ ಪತ್ರ ಬರೆದಿದ್ದೀರಾ?”ಕಾಶ್ಮೀರವನ್ನು ಉಲ್ಲೇಖಿಸಿದ ಅವರು, “ಭಾರತವು ಕಾಶ್ಮೀರದಲ್ಲಿ ಅಂತರರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸಿದಾಗ… ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿಯಮಗಳಿಗೆ ವಿರುದ್ಧವಾಗಿ ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಭಾರತ ಕೊನೆಗೊಳಿಸಿದಾಗ ನೀವು ಯಾರಾದರೂ ಭಾರತದೊಂದಿಗೆ ಸಂಬಂಧವನ್ನು ಕಡಿತಗೊಳಿಸಿದ್ರೇನು? ಭಾರತದ ಮೇಲೆ ಯಾವುದೇ ನಿರ್ಬಂಧ ವಿಧಿಸಲಾಯಿತಾ? ಹಾಗಾದರೆ ನಿಮ್ಮ ಮುಂದೆ ನಾವೇನು? ನೀವು ಏನು ಹೇಳಿದರೂ ನಾವು ಮಾಡಬೇಕೆ? ನಾವು ನಿಮ್ಮ ಗುಲಾಮರೇ ಎಂದು ಇಮ್ರಾನ್ ಖಾನ್ ಪ್ರಶ್ನಿಸಿದ್ದಾರೆ.ಅಫ್ಘಾನಿಸ್ತಾದ ಬಗ್ಗೆಯೂ ಉಲ್ಲೇಖಿಸಿದ ಇಮ್ರಾನ್ ಖಾನ್, ಅಫ್ಘಾನಿಸ್ತಾನದಲ್ಲಿ ಪಾಕಿಸ್ತಾನವು ನ್ಯಾಟೋವನ್ನು ಬೆಂಬಲಿಸಿತು. ಆದರೆ ಪಾಕಿಸ್ತಾನಕ್ಕೆ ಕೃತಜ್ಞತೆ ಹೇಳುವ ಬದಲು ನ್ಯಾಟೋ ದೇಶಗಳು ಪಾಕಿಸ್ತಾನವನ್ನು ಟೀಕಿಸಿದ್ವು ಎಂದು ಹೇಳಿದ್ದಾರೆ.ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಕಿಸ್ತಾನ ಮತದಾನದಿಂದ ದೂರ ಉಳಿಯಿತು. ಪಾಕಿಸ್ತಾನದಂತೆ ಭಾರತ, ಚೀನಾದಂತಹ ರಾಷ್ಟ್ರಗಳೂ ರಷ್ಯಾ ವಿರುದ್ಧದ ನಿರ್ಣಾಯಕ ಮತದಾನದಲ್ಲಿ ಪಾಲ್ಗೊಂಡಿರಲಿಲ್ಲ ಎಂದು ಇಮ್ರಾನ್ ಖಾನ್ ಪಾಶ್ಚಿಮಾತ್ಯ ರಾಷ್ಟ್ರಗಳನ್ನು ಪ್ರಶ್ನೆ ಮಾಡಿದರು.

ದಾಳಿಯ ಮೊದಲ ದಿನವೇ ಇಮ್ರಾನ್ ರಷ್ಯಾ ಭೇಟಿ

ಉಕ್ರೇನ್ ಮೇಲೆ ರಷ್ಯಾದ ಆಕ್ರಮಣ ಆರಂಭವಾದ ದಿನದಂದೇ ಇಮ್ರಾನ್ ಖಾನ್ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿಯಾದರು. ದಾಳಿಯ ನಡುವೆಯೇ ಉಭಯ ನಾಯಕರ ಭೇಟಿ ಸಾಕಷ್ಟು ಸುದ್ದಿ ಮಾಡಿತ್ತು. ಬಳಿಕ, ಇಮ್ರಾನ್ ಖಾನ್ ಹಾಗೂ ಪುಟೀನ್ ಭೇಟಿಯನ್ನು ಪಾಶ್ಚಿಮಾತ್ಯ ರಾಷ್ಟ್ರಗಳು ಖಂಡಿಸಿದವು. ಆದರೆ ಇಮ್ರಾನ್ ಖಾನ್ ಅವರು ಇದು ದ್ವೀಪಕ್ಷಿಯ ಭೇಟಿಯೇ ಹೊರತು.. ನಾವು ಯಾವುದೇ ಬ್ಲಾಕ್ ನಲ್ಲಿ ಇಲ್ಲ ಎಂದು ಸ್ಪಷ್ಟನೆ ನೀಡಿದ್ದರು.

ಸುದ್ದಿ ಓದಿ