ಕಳೆದುಹೋದ 45 ಮೊಬೈಲ್‌ಗಳನ್ನು ಪತ್ತೆ ಹಚ್ಚಿ ಮಾಲೀಕರಿಗೆ ಹಸ್ತಾಂತರಿಸಿದ ಅಂಕಲಿ ಪೊಲೀಸರು
ಲೋಕದರ್ಶನ ವರದಿ
ಮಾಂಜರಿ 17 : ಕಳೆದುಹೋದ ಮತ್ತು ಕದ್ದ ಮೊಬೈಲ್ ಫೋನ್ ಪತ್ತೆ ಹಚ್ಚಿದ ಸ್ಥಳೀಯ ಪೊಲೀಸರು, ಮಂಗಳ ವಾರ ಅವುಗಳನ್ನು ಮಾಲೀಕರಿಗೆ ಹಿಂತಿರುಗಿಸಿ ದರು. ಇದರೊಂದಿಗೆ ಅಂಕಲಿ ಪೊಲೀಸರ ಜನಸ್ನೇಹಿ ಕ್ರಮಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ಅಂಕಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನವಾಗಿದ್ದ ಸುಮಾರು 6.85 ಲಕ್ಷ ಬೆಲೆ ಬಾಳುವ 45 ಮೊಬೈಲ್‌ಗಳನ್ನು ವಾರಸುದಾರರಿಗೆ ಪೊಲೀಸ್ ಇಲಾಖೆ ನೀಡಿದೆ. ಠಾಣೆಯಲ್ಲಿ ದಾಖಲಾದಮೊಬೈಲ್ ಕಳ್ಳತನ ಪ್ರಕರಣಗಳಲ್ಲಿ ಮೊಬೈಲ್ ಕಳೆದುಕೊಂಡ ಸಂತೃಸ್ಥರಿಗೆ ಚಿಕ್ಕೋಡಿ ಡಿಎಸ್ಪಿ ಗೋಪಾಲಕೃಷ್ಣ ಗೌಡರ ಹಾಗೂ ಸಿಪಿಐ ವಿಶ್ವನಾಥ್ ಚೊಗುಲಾ ಮತ್ತು ಸ್ಥಳೀಯ ಪೊಲೀಸ್ ಠಾಣೆಯ ಪಿಎಸ್‌ಐ ನಂದೀಶ್ ಹಾಗೂ ಇನ್ನಿತರ ಅಧಿಕಾರಿಗಳು ಮೊಬೈಲ್ ಗಳನ್ನು ಮರಳಿ ನೀಡಿದರು.
ಕಳ್ಳತನ ಆದಂತಹ ಮೊಬೈಲ್‌ಗಳನ್ನು ಕೇಂದ್ರ ಸಲಕರಣೆ ಗುರುತಿಸುವಿಕೆ ನೋಂದಣಿ (ಸಿಇಐಆರ್) ವ್ಯವಸ್ಥೆ ಮೂಲಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮಾರ್ಗದರ್ಶನದಲ್ಲಿ ಪತ್ತೆ ಹಚ್ಚಿದ ಅಂಕಲಿ ಪೊಲೀಸರು, ಪೊಲೀಸ್ ಠಾಣೆಯ ಕಚೇರಿಯಲ್ಲಿ ಮಾಲೀಕರಿಗೆ ಹಿಂತಿರುಗಿ ಸುವಲ್ಲಿ ಯಶಸ್ವಿಯಾಗಿದ್ದಾರೆ. ಪಿಎಸೈ ನಾಗರಾಜ್ ಮೋಳೆ ರಾಮಚಂದ್ರ ಖೋತ್ ಮಹಿಳಾ ಪೊಲೀಸ್ ಪೇದೆ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
ಒಂದು ಕಡೆ ಫೋನ್ ಸಿಗುವುದಿಲ್ಲ ಎಂಬ ಹತಾಶೆ, ಮತ್ತೊಂದು ಕಡೆ ಅದರಲ್ಲಿರುವ ಪ್ರಮುಖ ದಾಖಲೆಗಳು ಮತ್ತು ಫೋಟೋಗಳ ಬಗ್ಗೆ ಆತಂಕ. ಇಂಥ ಪರಿಸ್ಥಿತಿಯಲ್ಲಿದ್ದ ಮಾಲೀಕರ ಮುಖದಲ್ಲಿ ಅಂಕಲಿ ಪೊಲೀಸರು ಈಗ ಮಂದಹಾಸ ಮೂಡಿಸಿದ್ದಾರೆ.
ಈ ಕಾರ್ಯಾಚರಣೆ ಅಷ್ಟು ಸುಲಭವಾಗಿ ರಲಿಲ್ಲ. ಠಾಣೆಯಲ್ಲಿ ದಾಖಲಾಗಿದ್ದ ದೂರುಗ ಳನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ತಾಂತ್ರಿಕ ತಂಡದ ಮೂಲಕ ಜಾಲ ಬೀಸಿದ್ದರು. ಕಳೆದು ಹೋಗಿದ್ದ ಮೊಬೈಲ್ ಗಳಲ್ಲಿ ಬೇರೆಯವರು ಸಿಮ್ ಕಾರ್ಡ್ ಹಾಕಿ ಬಳಸುತ್ತಿರುವುದನ್ನು ಪತ್ತೆ ಹಚ್ಚಿದ ಖಾಕಿ ಪಡೆ, ಆ ಜಾಡು ಹಿಡಿದು ಬರೋಬ್ಬರಿ 6.85 ಲಕ್ಷ ರೂಪಾಯಿ ಮೌಲ್ಯದ 45 ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಂಡಿದೆ.