75ನೇ ವರ್ಷದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಕಾರ್ಯಕ್ರಮ
ಲೋಕದರ್ಶನ ವರದಿ
ಮುಂಡರಗಿ 24: ಇಂದಿನ ಮನುಕುಲವು ತಮ್ಮ ಜ್ಞಾನದ ಕೊರತೆಯಿಂದ ಇನ್ನೊಬ್ಬರ ಗುಲಾಮರಾಗಿ ಬದುಕುತ್ತಿರುವುದು ಬೆಸರದ ಸಂಗತಿ. ಹೀಗಾಗಿ ಬಸವಾದಿ ಶರಣರು ಮನುಷ್ಯನಿಗೆ ದೈಹಿಕವಾಗಿ ಸ್ವತಂತ್ರವನ್ನು ಕೊಡದೇ ಮಾನಸಿಕ ಸ್ವತಂತ್ರವನ್ನು ಕೊಡುವುದರ ಮೂಲಕ ಪ್ರತಿಯೊಬ್ಬ ಮನುಷ್ಯನಿಗೆ ಅರಿವನ್ನು ಹುಟ್ಟಿಸುವ ಮಹೋತ್ತರ ಕೆಲಸವನ್ನು ಮಾಡಿದರು ಎಂದು ಇಲಕಲ್ಲದ ಚಿತ್ತರಗಿ ಸಂಸ್ಥಾನ ಮಠದ ಶ್ರೀ ಗುರುಮಹಾಂತ ಮಹಾಸ್ವಾಮಿಗಳು ಹೇಳಿದರು.
ಪಟ್ಟಣದ ಜಗದ್ಗುರು ತೋಂಟದಾರ್ಯ ಶಾಖಾಮಠದಲ್ಲಿ ಏರಿ್ಡಸಿದ ಶರಣ ಚರಿತಾಮೃತ ಪ್ರವಚನ ಮಂಗಲೋತ್ಸವ ಹಾಗೂ ಭಾರತದ 75ನೇ ವರ್ಷದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವಹಿಸಿ ಅವರು ಆಶಿರ್ಷಚನ ನೀಡಿದರು.
ಇಂದಿನ ಪ್ರತಿಯೊಬ್ಬ ಯುವಕರು ತಮ್ಮ ದೈಹಿಕ ಬೆಳವಣಿಗೆಯ ಜೊತೆಗೆ ಮಾನಸಿಕ ಬೆಳವಣಿಗೆ ಹಾಗೂ ವೈಚಾರಿಕ ಚಿಂತನೆೆಗಳನ್ನು ಮೈಗೂಡಿಸಿಕೊಳ್ಳುವಲ್ಲಿ ಮುಂದಾಗಬೇಕು. ಅಂದಾಗ ನಮ್ಮ ಬದುಕನ್ನು ಸುಂದರಗೊಳಿಸಲು ಸಾಧ್ಯವಾಗುತ್ತದೆ. ಹಾಗೂ ಪ್ರತಿಯೊಬ್ಬ ಮನುಷ್ಯನು ಶರಣರ ಚರಿತ್ರೆಗಳನ್ನು ಓದುವ ಹವ್ಯಾಸವನ್ನು ಮಾಡಿಕೊಳ್ಳುವುದರೊಂದಿಗೆ ಶರಣ ಸಾಹಿತ್ಯದ ಬಗ್ಗೆ ಅರಿವನ್ನು ಕಂಡುಕೊಳ್ಳಬೇಕಾಗಿದೆ ಎಂದು ಹೇಳಿದರು.
ಮಾಜಿ ಸಭಾಪತಿ ಹಾಗೂ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ, ಪ್ರತಿಯೊಬ್ಬ ತಂದೆ ತಾಯಂದಿರು ತಮ್ಮ ಮಕ್ಕಳಿಗೆ ಶಿಕ್ಷಣವನ್ನು ಕೊಡಿಸುವುದರೊಂದಿಗೆ ಉತ್ತಮ ಸಂಸ್ಕಾರವನ್ನು ನೀಡುವುದು ತಂದೆ ತಾಯಿಯವರ ಕರ್ತವ್ಯ. ಹೀಗಾಗಿ ಮಕ್ಕಳಲ್ಲಿ ಸಂಸ್ಕಾರ ಇದ್ದರೇ ಅವರ ಮುಂದಿನ ಜೀವನ ಸುಂದರಗೊಳ್ಳುವಲ್ಲಿ ಸಹಕಾರಿಯಾಗುತ್ತದೆ. ಹಾಗೂ ತಂದೆ ತಾಯಿಯನ್ನು ಸಾಕುವ ಅರಿವು ಅವನಲ್ಲಿ ಮೂಡುತ್ತದೆ. ಏಕೆಂದರೆ ತಾಯಿಯ ಋಣವನ್ನು ತೀರಿಸಲು ಯಾರಿಂದಲೂ ಸಾಧ್ಯವಿಲ್ಲ. ಅಲ್ಲದೇ ಇಂದಿನ ದಿನಮಾನದಲ್ಲಿ ಇಂಗ್ಲೀಷ್ ವ್ಯಾಮೋಹಕ್ಕೆ ಮಾರುಹೋಗಿ ಎಲ್ಲರೂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳಿಗೆ ಶಿಕ್ಷಣ ಕೊಡಿಸಲು ಮುಂದಾಗಿದ್ದಾರೆ. ಇದರಿಂದ ಕನ್ನಡ ಭಾಷೆಯ ಕಲಿಕೆಯ ಗುಣಮಟ್ಟ ಕಡಿಮೆಯಾಗಿ ಸಾಹಿತ್ಯ ಹಾಗೂ ವಚನಗಳ್ನು ಓದುವುದರಲ್ಲಿ ಆಸಕ್ತಿ ಕಡಿಮೆಯಾಗುತ್ತಾ ಹೋಗುತ್ತಿದೆ.
ಆದ್ದರಿಂದ ಪ್ರತಿಯೊಬ್ಬ ಯುವಕನು ಪರಿಶುದ್ಧ ಜ್ಞಾನವನ್ನು ಪಡೆಯಬೇಕಾದರೆ, ಇಂತಹ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಲ್ಲಿ ಮುಂದಾಗಬೇಕು. ಅಲ್ಲಿ ನೀಡುವ ಶರಣರ ತತ್ವಾದರ್ಶಗಳ ಅರಿವನ್ನು ಕಂಡುಕೊಳ್ಳಬಹುದು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಬಸವಣ್ಣನವರ ತತ್ವವನ್ನು ಅನುಸರಿಸಬೇಕು. ಈಡಿ ಕರ್ನಾಟಕದಲ್ಲಿ ಜಾತಿ ಮಾಡದೇ ಎಲ್ಲರನ್ನು ಸಮಾನ ದೃಷ್ಟಿಯಲ್ಲಿ ಕಾಣುವಂತ ಮಠಗಳಲ್ಲಿ ಶ್ರೀ ಜಗದ್ಗುರು ತೋಂಟದಾರ್ಯ ಮಠವೂ ಕೂಡಾ ಒಂದು ಎಂದು ಅಭಿಪ್ರಾಯಪಟ್ಟರು.
ಬೆಂಗಳೂರು ಮತ್ತು ಹುಬ್ಬಳ್ಳಿಯ ಆಯುರ್ವೇದ ಸಂಶೋಧನಾ ಕೇಂದ್ರ ಹಾಗೂ ಗಂಗಾಯೋಗ ನಿಸರ್ಗ ಚಿಕಿತ್ಸಾ ಕೇಂದ್ರದ ಗುರುಗಳಾದ ಡಾ.ವೈದ್ಯಶ್ರೀ ಚನ್ನಬಸವ ಶ್ರೀಗಳು ಮಾತನಾಡಿ, ಮನುಷ್ಯನಿಗೆ ಕಾಯಿಲೆ ಬರುವುದು ನಾವು ಮಾಡುವ ತಪ್ಪುಗಳಿಂದ ಮಾತ್ರ. ಅವುಗಳನ್ನು ನಿವಾರಿಸಲು ಓಷದಿಗಳು ಬೇಕಾಗಿಲ್ಲ. ಬದಲಾಗಿ ನಮ್ಮ ತಪ್ಪುಗಳನ್ನು ತಿದ್ದಿಕೊಳ್ಳುವುದರಿಂದ ನಾವು ಆರೋಗ್ಯವಾಗಿರಬಹುದು. ಹೀಗಾಗಿ ಶರಣರು ಕೊಡಮಾಡುವ ಕಾಯಕ ಎಂಬ ಓಷದಿಯಿಂದ ಎಲ್ಲಾ ರೋಗ ರುಜಿನಗಳು ಮಾಯವಾಗುತ್ತವೆ.
ಪ್ರತಿಯೊಬ್ಬ ಮನುಷ್ಯನು ದಾಸೋಹ ಮಾಡುವಲ್ಲಿ ಮುಂದಾಗಬೇಕು. ಅದರಿಂದ ನಮ್ಮ ಅಂತರಾಳದಲ್ಲಿ ಅಡಗಿರುವ ಕಲ್ಮಷಗಳನ್ನು ದೂರಮಾಡಬಹುದು. ಹೀಗಾಗಿ ಪ್ರತಿಯೊಬ್ಬ ಸ್ವಾಮೀಜಿಯು ಸಾಧನೆಯ ಮೂಲಕ ಧರ್ಮವನ್ನು ಕಟ್ಟಬೇಕೆ ಹೊರತು ಭೋಧನೆಯ ಮೂಲಕ ಧರ್ಮ ಕಟ್ಟಲು ಸಾಧ್ಯವಿಲ್ಲ. ಭಾರತ ದೇಶವು ಬಹುತ್ವದ ದೇಶವಾಗಿ ಹೊರಹೊಮ್ಮಿದೆ. ಇದನ್ನು ಕಳೆದುಕೊಂಡರೆ ಮತ್ತೊಂದು ಭಾರತವನ್ನು ಕಟ್ಟಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಸ್ವತಂತ್ರ ಭಾರತಕ್ಕೆ ಅರ್ಥಬರಬೇಕಾದರೆ ಎಲ್ಲರೂ ಲಿಂಗವನ್ನು ಧರಿಸಿಕೊಳ್ಳಬೇಕು. ಆ ಮೂಲಕ ದೇಶದ ಉಳಿವಿಗಾಗಿ ಮಾನಸಿಕ ಆದ್ಯಾತ್ಮಿಕ ಸ್ವಾತಂತ್ರ್ಯವನ್ನು ಕಂಡುಕೊಳ್ಳಬೇಕು ಎಂದು ಹೇಳಿದರು.
ಈ ವೇಳೆ ಶಹಾಪೂರ ಬಸವ ಮಾರ್ಗ ಮುಖ್ಯಸ್ಥ ವಿಶ್ವರಾಧ್ಯ ಸತ್ಯಂಪೇಟೆ ಮಾತನಾಡಿ, ವೈಜ್ಞಾನಿಕ ಕಾಲಘಟ್ಟದಲ್ಲಿ ವಿಜ್ಞಾನದ ಆವಿಸ್ಕಾರಗಳನ್ನು ಮಾಡುತ್ತಾ ಮೌಡ್ಯಗಳಿಗೆ ಜೋತು ಬಿದ್ದಿದ್ದಾರೆ. ಹೀಗಾಗಿ ಅಭಿವ್ಯಕ್ತಿ ಸ್ವಾತಂತ್ರ್ಯ ಇಲ್ಲದೇ ಯಾವ ಮನುಷ್ಯನೂ ಬೆಳೆಯಲು ಸಾಧ್ಯವಿಲ್ಲ. ಆದ್ದರಿಂದ ಪ್ರತಿಯೊಬ್ಬರಲ್ಲಿರೂ ವಚನ ಚಿಂತನೆಯ ಜಾಗೃತಿ ಮೂಡಿಬರಬೇಕು ಎಂದು ಸಲಹೆ ನೀಡಿದರು.
ಈ ವೇಳೆ ನಿಜಗುಣ ಪ್ರಭು ತೋಂಟದಾರ್ಯ ಶ್ರೀಗಳ ನೇತೃತ್ವದಲ್ಲಿ ಶ್ರೀಮಠದಲ್ಲಿ ವಿವಿಧ ವಿಶೇಷ ಕಾರ್ಯಕ್ರಮಗಳು ಜರುಗಿದವು. 75ನೇ ವರ್ಷದ ಭಾರತ ದೇಶದ ಸ್ವಾತಂತ್ರ್ಯದ ಸವಿನೆನಪಿಗಾಗಿ ನಗರವನ್ನು ಸ್ವಚ್ಛಗೊಳಿಸುವ 75 ಪೌರಕಾರ್ಮಿಕರಿಗೆ ಸತ್ಕಾರ ಜರುಗಿತು. ಕಾರ್ಯಕ್ರಮವನ್ನು ಹಿರಿಯ ಭಕ್ತರಾದ ಕೊಟ್ರೇಶ ಅಂಗಡಿ ನಿರೂಪಿಸದರು. ಪಾಲಾಕ್ಷಿ ಗಣದಿನ್ನಿ ಸ್ವಾಗತಿಸಿದರು. ಅಂದಿನ ದಾಸೋಹವನ್ನು ಮುಂಡರಗಿಯ ಲಿಂಗೈಕ್ಯ ಶ್ರೀ ಎಚ್.ಎಸ್.ಪಾಟೀಲ್ ಇವರ ಸ್ಮರಣಾರ್ಥ ಶ್ರೀಮತಿ ಕಮಲಾ ಹೆಚ್. ಪಾಟೀಲ್ ವಹಿಸಿದ್ದರು.
ಈ ವೇಳೆ ಮಾಜಿ ಸಚಿವ ಎಸ್.ಎಸ್.ಪಾಟೀಲ್, ಪುರಸಭೆ ಅಧ್ಯಕ್ಷೆ ಕವಿತಾ ಉಳ್ಳಾಗಡ್ಡಿ, ಗದಗ ಜೆ.ಟಿ ವಿದ್ಯಾಪೀಠದ ಆಡಳಿತಾಧಿಕಾರಿ ಶಿವಾನಂದ ಪಟ್ಟಣಶೆಟ್ಟಿ, ದಾನಯ್ಯ ಗಣಾಚಾರಿ, ಹೆಚ್.ವಿರುಪಾಕ್ಷಗೌಡ್ರ, ಶಿವಕುಮಾರ ಬೆಟಗೇರಿ, ಪವನ ಛೋಪ್ರಾ, ಉಮೇಶ ಹರೇಮಠ ಇತರರು ಇದ್ದರು.