ಬಾಂಗ್ಲಾದ ಹಿಂದೂಗಳಿಗೆ ರಕ್ಷಣೆ ಕಲ್ಪಿಸುವಂತೆ ಅಮೆರಿಕಾ ನಾಯಕಿ ಆಗ್ರಹ
ವಾಷಿಂಗ್ಟನ್, ಅ 21 ಬಾಂಗ್ಲಾದೇಶದಲ್ಲಿ ನಡೆದ ಹಿಂಸಾಚಾರವನ್ನು ಖಂಡಿಸಿ "ಹಿಂದೂಗಳು ಸೇರಿದಂತೆ ಎಲ್ಲಾ ಧಾರ್ಮಿಕ ಅಲ್ಪಸಂಖ್ಯಾತರಿಗೆ ರಕ್ಷಣೆ ಕಲ್ಪಿಸಬೇಕು ಎಂದು ಅಮೆರಿಕಾದ ಡೆಮಾಕ್ರಟಿಕ್ ಪಕ್ಷದ ನಾಯಕಿ, ಮಾಜಿ ಸಂಸದೆ ತುಳಸಿ ಗಬ್ಬಾರ್ಡ್ ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಈ ಸಂಬಂಧ ತುಳಸಿ ಗಬ್ಬಾರ್ಡ್ ವಿಡಿಯೋವೊಂದನ್ನು ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ಆಕೆ ವಿಷಾದ ವ್ಯಕ್ತಪಡಿಸಿದ್ದಾರೆ. "ಬಾಂಗ್ಲಾದೇಶದ ದೇಗುಲಗಳಲ್ಲಿ ಭಗವಂತನ ಆರಾಧಕರ ಕುರಿತ ದ್ವೇಷ, ಹಿಂಸೆಯನ್ನು ನೋಡಿ ನನ್ನ ಹೃದಯ ಒಡೆದಿದೆ" ಎಂದು ತುಳಸಿ ವಿಡಿಯೋ ಸಂದೇಶದಲ್ಲಿ ಹೇಳಿದ್ದಾರೆ.
ದುರ್ಗಾ ಪೂಜೆ ಸಂದರ್ಭದಲ್ಲಿ ಪವಿತ್ರ ಕುರಾನ್ ಗ್ರಂಥವನ್ನು ಅಪಮಾನಿಸಿದ್ದಾರೆಂಬ ವದಂತಿಗಳಿಂದ ಬಾಂಗ್ಲಾದೇಶದಲ್ಲಿ ಹಿಂಸಾಚಾರ ಆರಂಭಗೊಂಡಿದ್ದು, ಈ ಘಟನೆಗಳಲ್ಲಿ ಕನಿಷ್ಟ ಐವರು ಮೃತಪಟ್ಟಿದ್ದಾರೆ.
ನೋಖಾಲಿಯಲ್ಲಿರುವ ಇಸ್ಕಾನ್ ದೇವಾಲಯ ಸೇರಿದಂತೆ ದೇಶದ ಹಲವು ದೇವಾಲಯಗಳನ್ನು ಗುರಿಯಾಗಿಸಿಕೊಂಡು ದಾಳಿಗಳು ನಡೆದಿವೆ. ಹಲವು ಕಡೆ ದೇವರ ವಿಗ್ರಹಗಳನ್ನು ದ್ವಂಸಗೊಳಿಸಿ, ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ.
ಹಿಂಸೆಯಲ್ಲಿ ಭಾಗಿಯಾಗಿರುವ ವ್ಯಕ್ತಿಗಳ ಮನಸ್ಥಿತಿಯನ್ನು ತುಳಸಿ ಗಬ್ಬಾರ್ಡ್ ಪ್ರಶ್ನಿಸಿದ್ದಾರೆ "ದೇವಾಲಯಗಳು, ಭಕ್ತಿ ವೇದಾಂತ ಸ್ವಾಮಿ ಪ್ರಭುಪಾದ ರಂತಹ ಸಾಧು ಸಂತರ ಪ್ರತಿಮೆಗಳಿಗೆ ಅಗ್ನಿ ಸ್ಪರ್ಷ ಮಾಡುವುದರಿಂದ ತಮ್ಮ ದೇವರನ್ನು ಸಂಪ್ರೀತಗೊಳಿಸಬಹುದೆಂಬ ವಿಶ್ವಾಸಹೊಂದಿರುವ ಈ ಜಿಹಾದಿಗಳು, ನಿಜಕ್ಕೂ ದೇವರಿಂದ ಎಷ್ಟು ದೂರವಿದ್ದಾರೆ ಎಂಬಹುದು ಇದರಿಂದ ಗೊತ್ತಾಗುತ್ತದೆ ಎಂದು ಹೇಳಿದ್ದಾರೆ.
ಜಾತ್ಯತೀತ ಬಾಂಗ್ಲಾದೇಶದಲ್ಲಿ, ಹಿಂದೂಗಳು, ಕ್ರಿಶ್ಚಿಯನ್ನರು ಹಾಗೂ ಬೌದ್ಧರು ಸೇರಿದಂತೆ ಧಾರ್ಮಿಕ ಅಲ್ಪಸಂಖ್ಯಾತರನ್ನು ಜಿಹಾದಿ ಪಡೆಗಳ ದ್ವೇಷದಿಂದ ರಕ್ಷಿಸುವ ಸಮಯ ಬಂದಿದೆ ಎಂದು ತುಳಸಿ ತಿಳಿಸಿದ್ದಾರೆ.
ಹಿಂದೂ ಧರ್ಮದ ಮೇಲೆ ನಡೆಯುತ್ತಿರುವ ದಾಳಿಗಳ ವಿರುದ್ಧ ತುಳಸಿ ಗಬ್ಬಾರ್ಡ್ ಧ್ವನಿ ಎತ್ತಿದ್ದಾರೆ. ತುಳಸಿ ಅವರಿಗೆ ಭಾರತದೊಂದಿಗೆ ಯಾವುದೇ ಸಂಬಂಧವಿಲ್ಲ. ಆಕೆಯ ಪೋಷಕರು ಕೂಡ ಭಾರತೀಯ ಮೂಲದವರಲ್ಲ.
ಆದರೆ, ಆಕೆ ಹಿಂದೂ ಧರ್ಮದಲ್ಲಿ ನಂಬಿಕೆ ಇಟ್ಟಿದ್ದಾಳೆ. ಅಮೆರಿಕದ ಸಂಸತ್ತನ್ನು ಪ್ರವೇಶಿಸಿದ ಮೊದಲ ಹಿಂದೂ ಮಹಿಳೆ ಎಂಬ ಹೆಗ್ಗಳಿಕೆ ಹೊಂದಿದ್ದಾರೆ.