ಪಾಕಿಸ್ತಾನದ ಮೂವರು ಯೋಧರನ್ನು ಕೊಂದ ಅಫ್ಘನ್ ಉಗ್ರರು!
ಇಸ್ಲಾಮಾಬಾದ್: ಏಪ್ರಿಲ್ 23: ಅಫ್ಘಾನಿಸ್ತಾನದ ಒಳಭಾಗದಿಂದ ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಪಾಕಿಸ್ತಾನ ಯೋಧರು ಸಾವಿಗೀಡಾಗಿದ್ದಾರೆ. ಈ ಘಟನೆ ಪಾಕಿಸ್ತಾನದ ಉತ್ತರ ವಜಿರಿಸ್ತಾನ್ ಜಿಲ್ಲೆಯ ದೇವಗರ್ ಪ್ರದೇಶದಲ್ಲಿ ನಡೆದಿದೆ ಎಂದು ಪಾಕಿಸ್ತಾನ ಸೇನಾ ಮಾಧ್ಯಮ ವಿಭಾಗ ತಿಳಿಸಿದೆ.
ಪಾಕಿಸ್ತಾನದ ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಷನ್ಸ್ (ISPR) ನೀಡಿದ ಮಾಹಿತಿಯಲ್ಲಿ, ಪಾಕಿಸ್ತಾನಿ ಪಡೆಗಳು ದಾಳಿಗೆ ಪ್ರತ್ಯುತ್ತರ ನೀಡಿವೆ. ಗುಪ್ತಚರ ವರದಿಗಳ ಪ್ರಕಾರ ಭಯೋತ್ಪಾದಕರು ಸಹ ಸಾಕಷ್ಟು ಸಾವು-ನೋವುಗಳನ್ನು ಅನುಭವಿಸಿದ್ದಾರೆ ಎಂದು ಎಆರ್‌ವೈ ನ್ಯೂಸ್ ಚಾನೆಲ್ ವರದಿ ಮಾಡಿದೆ. ಪಾಕಿಸ್ತಾನದ ಹವಾಲ್ದಾರ್ ತೈಮೂರ್ (ಜೀಲಂ ನಿವಾಸಿ, 30 ವರ್ಷ), ನಾಯಕ್ ಶೋಯೆಬ್ (ಅಟಾಕ್ ನಿವಾಸಿ, ವಯಸ್ಸು 38 ವರ್ಷ) ಮತ್ತು ಸಿಪಾಯಿ ಸಾಕಿಬ್ ನವಾಜ್ (ಸಿಯಾಲ್ಕೋಟ್ ನಿವಾಸಿ, ವಯಸ್ಸು 24 ವರ್ಷ) ಗುಂಡಿನ ಚಕಮಕಿಯಲ್ಲಿ ಹತರಾಗಿದ್ದಾರೆ.
ದಾಳಿಗೆ ಪ್ರತಿಕ್ರಿಯೆಯಾಗಿ ISPR, “ಪಾಕಿಸ್ತಾನದ ವಿರುದ್ಧದ ಚಟುವಟಿಕೆಗಳಿಗೆ ಭಯೋತ್ಪಾದಕರು ಆಫ್ಘನ್ ಮಣ್ಣನ್ನು ಬಳಸುವುದನ್ನು ಪಾಕಿಸ್ತಾನವು ಬಲವಾಗಿ ಖಂಡಿಸುತ್ತದೆ. ಭವಿಷ್ಯದಲ್ಲಿ ಅಂತಹ ಚಟುವಟಿಕೆಗಳನ್ನು ನಡೆಸಲು ಆಫ್ಘನ್ ಸರ್ಕಾರವು ಅನುಮತಿಸುವುದಿಲ್ಲ ಎಂದು ಪಾಕಿಸ್ತಾನ ನಿರೀಕ್ಷಿಸುತ್ತದೆ” ಎಂದು ಐಎಸ್‌ಪಿಆರ್ ತಿಳಿಸಿದೆ.
ಮತ್ತೊಂದು ಭಯೋತ್ಪಾದಕ ಘಟನೆಯಲ್ಲಿ ಬಲೂಚಿಸ್ತಾನದ ಅವರನ್‌ನಲ್ಲಿ ಭಯೋತ್ಪಾದಕರೊಂದಿಗಿನ ಗುಂಡಿನ ಚಕಮಕಿಯಲ್ಲಿ ಪಾಕಿಸ್ತಾನದ ಸೇನಾ ಮೇಜರ್ ಸಾವನ್ನಪ್ಪಿದ್ದರೆ, ಸೈನಿಕನೊಬ್ಬ ಗಾಯಗೊಂಡಿದ್ದಾನೆ ಎಂದು ಪಾಕಿಸ್ತಾನಿ ಮಾಧ್ಯಮಗಳು ಸುದ್ದಿ ಬಿತ್ತರ ಮಾಡಿದ್ದವು.
ಇನ್ನು ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, “ವಜಿರಿಸ್ತಾನದ ದೇವಗಾರ್‌ನಲ್ಲಿ ಗಡಿಯಾಚೆಯಿಂದ ಭದ್ರತಾ ಪಡೆಗಳ ಸಿಬ್ಬಂದಿಯ ಮೇಲೆ ನಡೆದ ಭಯೋತ್ಪಾದಕ ದಾಳಿಯನ್ನು ಬಲವಾಗಿ ಖಂಡಿಸುತ್ತೇವೆ. ನಮ್ಮ ಮೂವರು ಸೈನಿಕರು ದೇಶದ ರಕ್ಷಣೆಗಾಗಿ ಪ್ರಾಣ ತ್ಯಾಗ ಮಾಡಿದ್ದಾರೆ. ಈ ತ್ಯಾಗಗಳು ಪಾಕಿಸ್ತಾನದ ಮೇಲೆ ದುಷ್ಟ ಕಣ್ಣು ಹಾಕಲು ಯಾರೂ ಧೈರ್ಯ ಮಾಡಬಾರದು ಎಂಬ ಸಂದೇಶವಾಗಿದೆ” ಎಂದು ಬರೆದುಕೊಂಡಿದ್ದಾರೆ.