ಚಿಕ್ಕೋಡಿಗೆ ರೂ20 ಕೋಟಿ ಹೆಚ್ಚುವರಿ ಅನುದಾನ
ಲೋಕದರ್ಶನ ವರದಿ
ಚಿಕ್ಕೋಡಿಗೆ ರೂ20 ಕೋಟಿ ಹೆಚ್ಚುವರಿ ಅನುದಾನ
ಚಿಕ್ಕೋಡಿ 11: ಪಟ್ಟಣದ ಸಮಗ್ರ ಅಭಿವೃದ್ಧಿಗಾಗಿ ಈಗಾಗಲೇ ?15.13 ಕೋಟಿ ಮೊತ್ತದ ವಿವಿಧ ಕಾಮಗಾರಿಗಳಿಗೆ ಅನುದಾನ ಮಂಜೂರಾಗಿದ್ದು, ಬಹುತೇಕ ಕಾಮಗಾರಿಗಳು ಪೂರ್ಣಗೊಂಡಿವೆ. ಉಳಿದ ಪ್ರದೇಶಗಳ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದ್ದು, ಶೀಘ್ರದಲ್ಲೇ ಮತ್ತೊಂದು ?20 ಕೋಟಿ ಅನುದಾನ ಮಂಜೂರಾಗಲಿದೆ ಎಂದು ಶಾಸಕ ಗಣೇಶ ಹುಕ್ಕೇರಿ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಪಟ್ಟಣದಲ್ಲಿ ಹೆಚ್ಚುತ್ತಿರುವ ವಾಹನ ಸಂಚಾರ ಮತ್ತು ಜನದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ಪ್ರಮುಖ ರಸ್ತೆಗಳಲ್ಲಿ ಸಂಚಾರ ವ್ಯವಸ್ಥೆ ಸುಗಮಗೊಳಿಸುವ ಹಾಗೂ ಸಾರ್ವಜನಿಕರಿಗೆ ಉತ್ತಮ ಮೂಲಸೌಕರ್ಯ ಕಲ್ಪಿಸುವ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದರು.
ಅಂಕಲಿ ಕೂಟದಿಂದ ದುರ್ಗಾ ಭವನದವರೆಗೆ ರಸ್ತೆ ಅಗಲೀಕರಣಕ್ಕಾಗಿ ಭೂಮಾಲೀಕರಿಗೆ ?1.09 ಕೋಟಿ ಪರಿಹಾರಧನ ವಿತರಿಸಲಾಗಿದ್ದು, ರಸ್ತೆ ಅಗಲೀಕರಣ ಕಾಮಗಾರಿ ಪ್ರಗತಿಯಲ್ಲಿದೆ. ಬಸವ ವೃತ್ತದಲ್ಲಿ ?3.87 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳು ಹಾಗೂ ಬಸ್ ನಿಲ್ದಾಣದಿಂದ ಹಳೆ ಪುರಸಭೆ ಕಾರ್ಯಾಲಯದವರೆಗೆ ?2 ಕೋಟಿ ವೆಚ್ಚದಲ್ಲಿ ಫುಟ್ಪಾತ್, ಚರಂಡಿ ಮತ್ತು ವಿದ್ಯುತ್ ಬೀದಿ ದೀಪ ಅಳವಡಿಸುವ ಕಾಮಗಾರಿಗಳು ನಡೆಯುತ್ತಿವೆ ಎಂದು ತಿಳಿಸಿದರು.
ಇದಲ್ಲದೆ, ಪಟ್ಟಣದ ವಿವಿಧ ವಾರ್ಡ್‌ಗಳ ಹಲವು ಬಡಾವಣೆಗಳಲ್ಲಿ ರಸ್ತೆ ಮತ್ತು ಚರಂಡಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಗಾಂಧಿ ಮಾರ್ಕೆಟ್, ರಾಶವಾಡಕರ ಗಲ್ಲಿ ಹಾಗೂ ಘಾಲೆಗಲ್ಲಿಗಳಲ್ಲಿ ಕಾಮಗಾರಿಗಳು ಪೂರ್ಣಗೊಂಡಿವೆ. ನಾಗಲಿಂಗೇಶ್ವರ ಕಾಲನಿ, ಅಂಬೇಡ್ಕರ್ ನಗರ ಮತ್ತು ಭೀಮನಗರದ ಪರಿಶಿಷ್ಟ ಜಾತಿ ಕಾಲನಿಗಳಲ್ಲಿಯೂ ರಸ್ತೆ ಹಾಗೂ ಚರಂಡಿ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ.
ಈ ಕಾಮಗಾರಿಗಳಿಂದ ಪಟ್ಟಣದ ವಿವಿಧ ಬಡಾವಣೆಗಳ ಜನರಿಗೆ ದೈನಂದಿನ ಸಂಚಾರ ಹಾಗೂ ಮೂಲಸೌಕರ್ಯದಲ್ಲಿ ಹೆಚ್ಚಿನ ಅನುಕೂಲವಾಗಿದೆ. ಮುಂದಿನ ಹಂತದಲ್ಲಿ ಪಟ್ಟಣದ ಉಳಿದ ಪ್ರದೇಶಗಳಿಗೂ ಅಭಿವೃದ್ಧಿ ಸೌಲಭ್ಯ ತಲುಪಿಸಿ, ಚಿಕ್ಕೋಡಿಯನ್ನು ಇನ್ನಷ್ಟು ಸುಸಜ್ಜಿತ ನಗರವನ್ನಾಗಿ ರೂಪಿಸಲು ನಿರಂತರವಾಗಿ ಪ್ರಯತ್ನಿಸಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಪ್ರಕಾಶ ಹುಕ್ಕೇರಿ ತಿಳಿಸಿದ್ದಾರೆ.