ಪಾಕಿಸ್ತಾನ: ಶ್ರೀಲಂಕಾದ ಕಾರ್ಮಿಕನಿಗೆ ಚಿತ್ರಹಿಂಸೆ ನೀಡಿ ಕೊಂದು, ದೇಹವನ್ನು ಸುಟ್ಟುಹಾಕಿದ ಗುಂಪು
ಸಿಯಾಲ್‌ಕೋಟ್: ಡಿ. 03: ಪಾಕಿಸ್ತಾನದ ಸಿಯಾಲ್‌ಕೋಟ್‌ನಲ್ಲಿ ಜನರ ಗುಂಪೊಂದು ಶ್ರೀಲಂಕಾದ ಪ್ರಜೆಗೆ ಚಿತ್ರಹಿಂಸೆ ನೀಡಿ ಆತನನ್ನು ಕೊಂದು, ನಂತರ ಆತನ ದೇಹವನ್ನು ಸುಟ್ಟು ಹಾಕಿರುವ ಘಟನೆ ಶುಕ್ರವಾರ ನಡೆದಿದೆ ಎಂದು ವರದಿಗಳು ತಿಳಿಸಿವೆ.
ವರದಿಗಳ ಪ್ರಕಾರ, ಪರಿಸ್ಥಿತಿಯನ್ನು ಹತೋಟಿಗೆ ತರಲು ಪೊಲೀಸರನ್ನು ನಂತರ ಘಟನಾ ಸ್ಥಳಕ್ಕೆ ಕಳುಹಿಸಲಾಗಿದೆ.
ಪಂಜಾಬ್ ಪೊಲೀಸ್ ಐಜಿ ರಾವ್ ಸರ್ದಾರ್ ಅಲಿ ಖಾನ್ ಅವರು ಘಟನೆಯ ಬಗ್ಗೆ ಅವರ ಗಮನಕ್ಕೆ ಬರುತ್ತಿದ್ದಂತೆ, ತಕ್ಷಣ ಸ್ಥಳಕ್ಕೆ ತಲುಪುವಂತೆ ಗುಜ್ರಾನ್‌ವಾಲಾ ಪ್ರಾದೇಶಿಕ ಪೊಲೀಸ್ ಅಧಿಕಾರಿಗೆ ಸೂಚನೆ ನೀಡಿದ್ದಾರೆ.
ವರದಿಯ ಪ್ರಕಾರ, ಸಿಯಾಲ್‌ಕೋಟ್‌ನ ವಜೀರಾಬಾದ್ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಖಾಸಗಿ ಕಾರ್ಖಾನೆಯ ಕಾರ್ಮಿಕರು ಕಾರ್ಖಾನೆಯ ರಫ್ತು ವ್ಯವಸ್ಥಾಪಕರ ಮೇಲೆ ಹಲ್ಲೆ ನಡೆಸಿಕೊಂದ ನಂತರ ಅವರ ದೇಹವನ್ನು ಸುಟ್ಟು ಹಾಕಿದ್ದಾರೆ ಎಂದು ವರದಿಯಾಗಿದೆ.
ಸಿಯಾಲ್‌ಕೋಟ್ ಜಿಲ್ಲಾ ಪೊಲೀಸ್ ಅಧಿಕಾರಿ ಉಮರ್ ಸಯೀದ್ ಮಲಿಕ್ ಅವರ ಪ್ರಕಾರ, ಆ ವ್ಯಕ್ತಿ ಶ್ರೀಲಂಕಾ ಪ್ರಜೆಯಾಗಿದ್ದು, ಪ್ರಿಯಾಂತ ಕುಮಾರ ಎಂದು ಗುರುತಿಸಲಾಗಿದೆ.
40ರ ಹರೆಯದ ಪ್ರಿಯಾಂತ ಕುಮಾರ ಅವರು ತೆಹ್ರೀಕ್-ಎ-ಲಬ್ಬೈಕ್ ಪಾಕಿಸ್ತಾನ್ (ಟಿಎಲ್‌ಪಿ)ಯ ಭಿತ್ತಿಪತ್ರದಲ್ಲಿ ಖುರಾನ್ ಶ್ಲೋಕಗಳನ್ನು ಕೆತ್ತಿದ್ದರು ಮತ್ತು ಅದನ್ನು ಕಸದ ಬುಟ್ಟಿಗೆ ಎಸೆದಿದ್ದಾರೆ ಎಂದು ಅಧಿಕಾರಿಯೊಬ್ಬರು ವರದಿ ಮಾಡಿದ್ದಾರೆ.
ಇಸ್ಲಾಮಿಸ್ಟ್ ಪಕ್ಷದ ಪೋಸ್ಟರ್ ಅನ್ನು ಕುಮಾರ ಅವರ ಕಚೇರಿಯ ಪಕ್ಕದ ಗೋಡೆಯ ಮೇಲೆ ಅಂಟಿಸಲಾಗಿದೆ. ಒಂದೆರಡು ಕಾರ್ಖಾನೆಯ ಕಾರ್ಮಿಕರು ಪೋಸ್ಟರ್ ತೆಗೆದಿದ್ದಾರೆ ಎಂದು ಅಧಿಕಾರಿ ಹೇಳಿದ್ದಾರೆ.
ಪಂಜಾಬ್ ಮುಖ್ಯಮಂತ್ರಿ ಉಸ್ಮಾನ್ ಬುಜ್ದಾರ್ ಅವರು ಇದು ಅತ್ಯಂತ ದುರಂತ ಘಟನೆ ಎಂದಿದ್ದಾರೆ.
2010 ರಲ್ಲಿ ಸಿಯಾಲ್‌ಕೋಟ್‌ನಲ್ಲಿ ಇದೇ ರೀತಿಯ ಘಟನೆ ವರದಿಯಾಗಿದೆ. ಅಲ್ಲಿ ಗುಂಪೊಂದು ಪೊಲೀಸರ ಸಮ್ಮುಖದಲ್ಲಿ ಇಬ್ಬರು ಸಹೋದರರನ್ನು ದರೋಡೆಕೋರರೆಂದು ಘೋಷಿಸಿ ಹತ್ಯೆಗೈದಿತ್ತು.