ಮುಂದಗೋಡ

ತಾಲ್ಲೂಕಿಗೆ ನಡುಕ ತಂದ ಪ್ರಕರಣ: ಕೊಳಗಿ ಅರಣ್ಯದಲ್ಲಿ ರುಂಡವಿಲ್ಲದ ಮಹಿಳೆಯ ಶವ ಪತ್ತೆ

ತಾಲ್ಲೂಕಿಗೆ ನಡುಕ ತಂದ ಪ್ರಕರಣ: ಕೊಳಗಿ ಅರಣ್ಯದಲ್ಲಿ ರುಂಡವಿಲ್ಲದ ಮಹಿಳೆಯ ಶವ ಪತ್ತೆ

ಲೋಕದರ್ಶನ ವರದಿ  

ಮುಂಡಗೋಡ 21: ತಾಲೂಕಿನ ಮಳಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಳಗಿ ಗ್ರಾಮದ ಸಮೀಪದ ಅರಣ್ಯ ಪ್ರದೇಶದಲ್ಲಿ ರುಂಡವಿಲ್ಲದ ಮಹಿಳೆಯ ಮೃತದೇಹ ಪತ್ತೆಯಾದ ಘಟನೆ ತಾಲೂಕಿನಲ್ಲಿ ಭೀತಿ ಮೂಡಿಸಿದೆ.  

ಶುಕ್ರವಾರ ಸಂಜೆ ಅರಣ್ಯ ಪ್ರದೇಶಕ್ಕೆ ಉರುವಲು ಕಟ್ಟಿಗೆ ತರಲು ತೆರಳಿದ್ದ ಕೆಲ ಗ್ರಾಮಸ್ಥರು ಮರದ ಎಲೆಗಳು ಹಾಗೂ ಟೊಂಗೆಗಳಿಂದ ಮುಚ್ಚಲ್ಪಟ್ಟಿದ್ದ ಶವವನ್ನು ಗಮನಿಸಿ ಬೆಚ್ಚಿಬಿದ್ದು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಪರೀಶೀಲನೆ ನಡೆಸಿದಾಗ, ಶವವು ಸುಮಾರು 35ಹಿ40 ವರ್ಷ ವಯಸ್ಸಿನ ಮಹಿಳೆಯದ್ದಾಗಿದ್ದು, ಪ್ರಾಥಮಿಕ ಅಂದಾಜು ಪ್ರಕಾರ ಎರಡು ದಿನಗಳ ಹಿಂದೆ ಹತ್ಯೆ ನಡೆದಿರಬಹುದೆಂದು ತಿಳಿದುಬಂದಿದೆ.  

ಆರೋಪಿಗಳು ಗುರುತು ಪತ್ತೆಯಾಗದಂತೆ ಮಾಡಲು ಶವವನ್ನು ಎಲೆಗಳಿಂದ ಮುಚ್ಚಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ. ಮೃತದೇಹದ ತಲೆಯನ್ನು ಬೇರಿ​‍್ಡಸಿರುವುದು ಪ್ರಕರಣದ ಗಂಭೀರತೆಯನ್ನು ಹೆಚ್ಚಿಸಿದೆ. ಶವವು ನಗ್ನ ಸ್ಥಿತಿಯಲ್ಲಿ ಪತ್ತೆಯಾಗಿರುವುದೂ ಹಲವು ಅನುಮಾನಗಳಿಗೆ ಕಾರಣವಾಗಿದೆ. ಸಿಪಿಐ ರಂಗನಾಥ ನೀಲಮ್ಮನವರ್ ಅವರ ನೇತೃತ್ವದ ಪೊಲೀಸ್ ತಂಡ ಸ್ಥಳ ಪರೀಶೀಲನೆ ನಡೆಸಿ ಅಗತ್ಯ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದೆ. ಪಿಎಸ್‌ಐ ಮಂಜುನಾಥ ಗೌಡ ಅವರು ಕೂಡ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರೀಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಪ್ರಕರಣದ ತನಿಖೆ ತೀವ್ರಗೊಳಿಸಲಾಗಿದೆ.  

ಮೃತೆಯ ಗುರುತು ಇನ್ನೂ ಪತ್ತೆಯಾಗಿಲ್ಲ. ಸುತ್ತಮುತ್ತಲಿನ ಪೊಲೀಸ್ ಠಾಣೆಗಳಿಗೆ ಮಾಹಿತಿ ರವಾನಿಸಲಾಗಿದ್ದು, ಕಾಣೆಯಾಗಿರುವ ಮಹಿಳೆಯರ ವಿವರಗಳನ್ನು ಪರೀಶೀಲಿಸಲಾಗುತ್ತಿದೆ. ರುಂಡಕ್ಕಾಗಿ ಶೋಧನಾ ಕಾರ್ಯಾಚರಣೆ ಮುಂದುವರಿದಿದೆ. ಕೊಲೆ ಸ್ಥಳೀಯರದ್ದೇನಾ ಅಥವಾ ಬೇರೆ ತಾಲೂಕಿನವರ ಕೈಚಳಕವೋ ಎಂಬುದು ತನಿಖೆಯಿಂದಲೇ ತಿಳಿಯಬೇಕಿದೆ. 


ಸುದ್ದಿ ಓದಿ