ಭಾರೀ ಪ್ರತಿಭಟನೆಗೆ ಬಗ್ಗಿದ ಪಿಎಂ; ಶ್ರೀಲಂಕಾ ಪ್ರಧಾನಿ ಮಹಿಂದಾ ರಾಜಪಕ್ಸೆ ರಾಜೀನಾಮೆ
ಕೊಲಂಬೊ: ಮೇ 09 : ರಾಷ್ಟ್ರವ್ಯಾಪಿ ಪ್ರತಿಭಟನೆಯು ತೀವ್ರಗೊಳ್ಳುತ್ತಿದ್ದಂತೆ ಶ್ರೀಲಂಕಾದ ಪ್ರಧಾನಿ ಮಹಿಂದಾ ರಾಜಪಕ್ಸೆ ಸೋಮವಾರ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಆರ್ಥಿಕ ಬಿಕ್ಕಟ್ಟಿನಲ್ಲಿ ಹೊಸ ಕ್ಯಾಬಿನೆಟ್‌ಗೆ ದಾರಿ ಮಾಡಿಕೊಟ್ಟಿದೆ.
ಶುಕ್ರವಾರ ನಡೆದ ವಿಶೇಷ ಸಭೆಯಲ್ಲಿ ಅಧ್ಯಕ್ಷ ಗೊಟ್ಬಯಾ ರಾಜಪಕ್ಸೆ ಅವರು ದೇಶದಲ್ಲಿ ನಡೆಯುತ್ತಿರುವ ರಾಜಕೀಯ ಬಿಕ್ಕಟ್ಟಿಗೆ ಪರಿಹಾರವಾಗಿ ಅಧಿಕಾರದಿಂದ ಕೆಳಗಿಳಿಯುವಂತೆ ಪ್ರಧಾನಿಗೆ ಮನವಿ ಮಾಡಿದ ಕೆಲವು ದಿನಗಳ ನಂತರ ಪ್ರಧಾನಿ ಮಹಿಂದಾ ರಾಜಪಕ್ಸೆ ಪಿಎಂ ಹುದ್ದೆಯಿಂದ ಕೆಳಗಿಳಿದಿದ್ದಾರೆ ಎಂದು ಶ್ರೀಲಂಕಾದ ಡೈಲಿ ಮಿರರ್ ವರದಿ ಮಾಡಿದೆ.
ಇದೀಗ ಪ್ರಧಾನಿ ರಾಜೀನಾಮೆ ನೀಡಿದ್ದು, ಅಧ್ಯಕ್ಷ ರಾಜಪಕ್ಸೆ ಅವರು ಸಂಸತ್ತಿನಲ್ಲಿ ಎಲ್ಲಾ ರಾಜಕೀಯ ಪಕ್ಷಗಳನ್ನು ಸರ್ವಪಕ್ಷಗಳ ಸಂಪುಟ ರಚನೆಗೆ ಆಹ್ವಾನಿಸುವ ನಿರೀಕ್ಷೆಯಿದೆ.
ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಒದ್ದಾಡುತ್ತಿರುವ ಕೊಲಂಬೋದಲ್ಲಿ ನಾಗರಿಕರು ಸೋಮವಾರ ಬೆಳಗ್ಗೆ ಪ್ರಧಾನಿಯವರ ಅಧಿಕೃತ ನಿವಾಸವಾದ ಟೆಂಪಲ್ ಟ್ರೀಸ್ ಎದುರು ಪ್ರತಿಭಟನೆ ನಡೆಸಿ, ಪ್ರಧಾನಿ ಮಹಿಂದಾ ರಾಜಪಕ್ಸೆ ರಾಜೀನಾಮೆ ನೀಡದಂತೆ ಒತ್ತಾಯಿಸಿದರು. ಈ ವೇಳೆ ಸರ್ಕಾರದ ಪರವಾಗಿದ್ದವರು ಹಾಗು ಪ್ರತಿಭಟನಾಕಾರರ ನಡುವೆ ಭಾರೀ ಘರ್ಷಣೆಯಾಗಿ ಅನಿರ್ದಿಷ್ಟಾವಧಿ ಕರ್ಫ್ಯೂ ವಿಧಿಸಲಾಯಿತು. ಘರ್ಷಣೆಯಲ್ಲಿ 20 ಮಂದಿ ಗಾಯಗೊಂಡಿದ್ದರು.
ಸಾರ್ವಜನಿಕರು ಸಂಯಮದಿಂದ ವರ್ತಿಸುವಂತೆ ಒತ್ತಾಯಿಸಿ ಮಹೀಂದಾ ರಾಜಪಕ್ಸೆ ಟ್ವೀಟ್ ಮಾಡಿದ ಬೆನ್ನಲ್ಲೇ ರಾಜೀನಾಮೆ ನೀಡಿದ್ದಾರೆ.
ವಿದೇಶಿ ವಿನಿಮಯ ಕೊರತೆಯಿಂದ ಉದ್ಭವಿಸಿರುವ ಆರ್ಥಿಕ ಬಿಕ್ಕಟ್ಟಿನಿಂದ ಶ್ರೀಲಂಕಾ ಆರ್ಥಿಕವಾಗಿ ಮುಳುಗಿದೆ. ಇದು ಇಂಧನ, ಆಹಾರ ಮತ್ತು ಔಷಧಿಗಳಂತಹ ಅಗತ್ಯ ಸರಬರಾಜುಗಳ ಕೊರತೆಗೆ ಕಾರಣವಾಗಿದೆ.
ಸರಕಾರ ಮತ್ತು ಶಾಸಕರು ತುರ್ತು ಪರಿಹಾರ ಕಂಡುಕೊಳ್ಳುವಂತೆ ಆಗ್ರಹಿಸಿ ಹಲವು ದಿನಗಳಿಂದ ಪ್ರತಿಭಟನೆಗಳು ನಡೆಯುತ್ತಿವೆ.