ಟ್ರಂಪ್ ಷೇರು ಬೆಲೆಯಲ್ಲಿ 9 ಪಟ್ಟು ಹೆಚ್ಚಳ; ಸೋಷಿಯಲ್ ಮೀಡಿಯಾಕ್ಕೆ ಟಕ್ಕರ್!
ನ್ಯೂಯಾರ್ಕ್, ಅ 24: ಡೊನಾಲ್ಡ್ ಟ್ರಂಪ್ ಯಾರಿಗೆ ಗೊತ್ತಿಲ್ಲ ಹೇಳಿ. ಅಮೆರಿಕದ ಮಾಜಿ ಅಧ್ಯಕ್ಷ ಏನೇ ಮಾಡಿದ್ರೂ ಟ್ವಿಸ್ಟ್ ಕೊಟ್ಟೆ ಕೊಡ್ತಾರೆ. ಹೌದು ಈಗ ಸೋಷಿಯಲ್ ಮೀಡಿಯಾಗಳನ್ನೇ ಎದುರು ಹಾಕಿಕೊಂಡು ಅವುಗಳಿಗೆ ಟ್ರಂಪ್ ಸೆಡ್ಡು ಹೊಡೆದಿದ್ದಾರೆ.
ಈ ವರ್ಷದ ಆರಂಭ ಅಂದರೆ ಜನವರಿ 6 ರಿಂದಲೇ ಟ್ವಿಟ್ಟರ್, ಫೇಸ್ ಬುಕ್ ಸೇರಿದಂತೆ ಸಾಮಾಜಿಕ ಮಾಧ್ಯಮಗಳು ಡೊನಾಲ್ಡ್ ಟ್ರಂಪ್ ಅವರನ್ನು ಬ್ಯಾನ್ ಮಾಡಿದ್ದವು. ಈ ಪ್ರತಿಕಾರ ತೀರಿಸಿಕೊಳ್ಳಲು ಡೊನಾಲ್ಡ್ ಟ್ರಂಪ್, ಟ್ರುತ್ ಸೋಷಿಯಲ್ ಮೀಡಿಯಾ (Truth Social Media) ಆಪ್ ನ್ನು ಮುಂದಿನ ವರ್ಷದಿಂದ ಲಾಂಚ್ ಮಾಡಲು ನಿರ್ಧರಿಸಿದ್ದಾರೆ.
ಡೌನ್ ಜೋನ್ಸ್ ನಲ್ಲಿ ಟ್ರಂಪ್ ಷೇರುಗಳು ಭರ್ಜರಿ ಜಿಗಿತ!
ಟ್ರಂಪ್ ಗೆ ಸೇರಿದ ಸಾಮಾಜಿಕ ಮಾಧ್ಯಮ ಉದ್ಯಮವಾದ ಡಿಜಿಟಲ್ ವರ್ಲ್ಡ್ ಆಕ್ವಿಸಿಶನ್ (DWAC) ಷೇರುಗಳು ಪ್ರತಿದಿನ ಏರುತ್ತಿವೆ. ಅಕ್ಟೋಬರ್ 19ರಂದು ಈ ಷೇರುಗಳ ಬೆಲೆ ಕೇವಲ 10.01 ಡಾಲರ್ ಆಗಿತ್ತು. ಆದ್ರೆ, ಕಳೆದ ಶುಕ್ರವಾರ ಈ ಕಂಪನಿಯ ಷೇರುಗಳು $94.20 ತಲುಪಿ ಅಮೆರಿಕದ ಷೇರು ಮಾರುಕಟ್ಟೆಯಲ್ಲಿ ಅಚ್ಚರಿಗೆ ಕಾರಣವಾಯಿತು.
ಡಿಜಿಟಲ್ ವರ್ಲ್ಡ್ ಆಕ್ವಿಸಿಶನ್ (DWAC) ಹಾಗೂ ಮೀಡಿಯಾ ಎಂಡ್ ಟೆಕ್ನಾಲಾಜಿಸ್ ಗ್ರೂಪ್ (TMTG) ಸ್ಟಾರ್ಟ್ ಅಪ್ ನೊಂದಿಗೆ ವಿಲೀನಗೊಳ್ಳಲಿದೆ ಅಂತಾ ಡೊನಾಲ್ಡ್ ಟ್ರಂಪ್ ಘೋಷಣೆ ಮಾಡಿದ್ದರು. ಈ ಘೋಷಣೆಗೂ ಮುನ್ನ ಬುಧವಾರದಿಂದ ಶುಕ್ರವಾರದವರೆಗೆ ಟ್ರಂಪ್ ಕಂಪನಿಯ ಷೇರುಗಳ ಮುಖಬೆಲೆಯಲ್ಲಿ 9 ಪಟ್ಟು ಹೆಚ್ಚಳ ಕಂಡುಬಂದಿದೆ.