ಪಸರಿಸಿದ ಬೆಂಕಿಯ ಕೆನ್ನಾಲಿಗೆ; 9 ಮಕ್ಕಳ ಸಾವು, 20 ಮಂದಿಗೆ ಗಾಯ
ಇಸ್ಲಾಮಾಬಾದ್: ಏಪ್ರಿಲ್ 20: ಪಾಕಿಸ್ತಾನದ ದಾದು ಜಿಲ್ಲೆಯ ಮಹಾರ್ ಟೌನ್ ಬಳಿಯ ಫೈಜ್ ಮೊಹಮ್ಮದ್ ಗ್ರಾಮದಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಸುಮಾರು 9 ಮಕ್ಕಳು ಸಾವನ್ನಪ್ಪಿದ್ದು, 20 ಮಂದಿ ಗಾಯಗೊಂಡಿದ್ದಾರೆ ಮತ್ತು 50 ಕ್ಕೂ ಹೆಚ್ಚು ಮನೆಗಳು ಸುಟ್ಟು ಭಸ್ಮವಾಗಿವೆ.
ಸಣ್ಣ ಗುಡಿಸಲಿನ ಅಡುಗೆಮನೆಯಲ್ಲಿ ಕಾಣಿಸಿಕೊಂಡ ಬೆಂಕಿಯ ಕೆನ್ನಾಲಿಗೆ ಸುಮಾರು 50 ಅಥವಾ ಅದಕ್ಕಿಂತ ಹೆಚ್ಚಿನ ಮನೆಗಳನ್ನು ಒಳಗೊಂಡಿರುವ ಸುತ್ತಮುತ್ತಲಿನ ಪ್ರದೇಶವನ್ನು ವೇಗವಾಗಿ ಆವರಿಸಿ ಸುಟ್ಟು ಕರಕಲು ಮಾಡಿತು ಎಂದು ಜಿಯೋ ನ್ಯೂಸ್ ವರದಿ ಮಾಡಿದೆ.
ಸುಮಾರು 150 ಎಮ್ಮೆಗಳು, ಹಸುಗಳು, ಮೇಕೆಗಳು ಮತ್ತು ಇತರ ಪ್ರಾಣಿಗಳು ಸುಟ್ಟುಹೋಗಿವೆ ಎಂದು ವರದಿಯಾಗಿದೆ. ಸೋಮವಾರ ೯.೩೦ ಗೆ ಕಾಣಿಸಿಕೊಂಡ ಬೆಂಕಿ ಮತ್ತು ಮಂಗಳವಾರ 9.00 ಗಂಟೆಗಳವರೆಗೆ ಬೆಂಕಿಯು ಉರಿಯುತ್ತಿತ್ತು ಎಂದು ಅವರು ಹೇಳಿದರು.
ಒಂಬತ್ತು ಮಂದಿ ಸಾವನ್ನಪ್ಪಿದ್ದಾರೆ ಮತ್ತು ಎಲ್ಲಾ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಮಹಾರ್ ತಾಲೂಕಾಸ್ಪತ್ರೆಗೆ ವರ್ಗಾಯಿಸಲಾಗಿದೆ ಎಂದು ದಾದು ಎಸ್‌ಎಸ್‌ಪಿ ಇರ್ಫಾನ್ ಅಲಿ ಸಮೂ ಹೇಳಿದರು.
ಸಾವಿನ ಬಗ್ಗೆ ದುಃಖ ವ್ಯಕ್ತಪಡಿಸಿದ ಸಿಂಧ್ ಮುಖ್ಯಮಂತ್ರಿ ಮುರಾದ್ ಅಲಿ ಶಾ ಅವರು ರಕ್ಷಣಾ ಕಾರ್ಯಾಚರಣೆಯನ್ನು ಹೆಚ್ಚಿಸಲು ಮತ್ತು ಗಾಯಾಳುಗಳಿಗೆ ವೈದ್ಯಕೀಯ ಸೌಲಭ್ಯವನ್ನು ಒದಗಿಸಲು ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದರು.
ಸಂತ್ರಸ್ತರ ಕುಟುಂಬಗಳಿಗೆ ಪರಿಹಾರ ನೀಡಲು ಫೆಡರಲ್ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಹೇಳಿದ್ದಾರೆ.