ದಕ್ಷಿಣ ಆಫ್ಘಾನಿಸ್ತಾನದಲ್ಲಿ ವೈಮಾನಿಕ ದಾಳಿ: 60 ತಾಲಿಬಾನ್ ಉಗ್ರರು ಹತ
ಕಾಬೂಲ್,ನವೆಂಬರ್ 2: ಆಫ್ಘಾನಿಸ್ತಾನದ ದಕ್ಷಿಣ ಪ್ರಾಂತ್ಯವಾದ ಕಂದಹಾರ್ ನಲ್ಲಿ ಭದ್ರತಾ ಪಡೆಗಳು ನಡೆಸಿದ
ವೈಮಾನಿಕ ದಾಳಿಯಲ್ಲಿ 60 ತಾಲಿಬಾನ್ ಉಗ್ರರು ಹತರಾಗಿದ್ದು, ಇತರ 40 ಮಂದಿ ಗಾಯಗೊಂಡಿದ್ದಾರೆ ಎಂದು
ಮೂಲವೊಂದು ಸ್ಪುಟ್ನಿಕ್ ಸುದ್ದಿಸಂಸ್ಥೆಗೆ ತಿಳಿಸಿದೆ.
ಆಫ್ಘನ್ ವಾಯುಪಡೆ ಯೋಧರು ಹೆಲ್ಮಾಂಡ್ ಪ್ರಾಂತ್ಯದಿಂದ ಕಂದಹಾರ್‌ನ ಝರಿ ಮತ್ತು ಪಂಜ್ವೈ ಜಿಲ್ಲೆಗಳಿಗೆ ತೆರಳುತ್ತಿದ್ದಾಗ 100 ಕ್ಕೂ ಉಗ್ರರ ಗುಂಪನ್ನು ಗುರುತಿಸಿ ಭಾನುವಾರ ರಾತ್ರಿ ದಾಳಿ ನಡೆಸಿದ್ದಾರೆ ಎಂದು ದೇಶದ ರಾಷ್ಟ್ರೀಯ ಭದ್ರತಾ ನಿರ್ದೇಶನಾಲಯದ ಪ್ರಕಟಣೆ ತಿಳಿಸಿದೆ.
ಕಂದಹಾರ್ ಪ್ರಾಂತ್ಯದ ಮೈವಾಂಡ್ ಜಿಲ್ಲೆಯ ಮಾಂಡೋಜೈ ಪ್ರದೇಶದಲ್ಲಿ 100 ಜನರ ಗುಂಪನ್ನು ವಾಯುಪಡೆ ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾರೆ. ದಾಳಿಯಲ್ಲಿ 60 ತಾಲಿಬಾನ್ ಉಗ್ರರು ಸಾವನ್ನಪ್ಪಿದ್ದು, ಇತರ 40 ಮಂದಿ ಗಾಯಗೊಂಡಿದ್ದಾರೆ. ಉಗ್ರರ ಕೆಲ ಶಸ್ತ್ರಾಸ್ತ್ರಗಳನ್ನು ಸಹ ನಾಶಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಆದರೆ, ತಾಲಿಬಾನ್ ವಕ್ತಾರ ಖಾರಿ ಯೂಸಫ್ ಅಹ್ಮದಿ ಈ ವರದಿಗಳನ್ನು ನಿರಾಕರಿಸಿ, ತಮ್ಮ ಕಡೆ
ಸಣ್ಣ-ಪುಟ್ಟ ಗಾಯಗಳಾಗಿವೆಯಷ್ಟೇ ಎಂದು ಹೇಳಿದ್ದಾರೆ.